ಕ್ರಿಕೆಟ್

ಮೊದಲ 10 ಓವರ್ ನಲ್ಲೇ 4 ವಿಕೆಟ್; ಶ್ರೀನಾಥ್, ಭುವಿ ಜೊತೆಗೂಡಿದ ಬುಮ್ರಾ, ದಾಖಲೆ

Srinivasamurthy VN

ಲಂಡನ್: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಪಾರಮ್ಯ ಮೆರೆದಿರುವ ಭಾರತ ತಂಡದ ಪರ ವೇಗಿ ಜಸ್ ಪ್ರೀತ್ ಬುಮ್ರಾ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

ಹೌದು.. ಲಂಡನ್ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿರುವ ಭಾರತ ಇಂಗ್ಲೆಂಡ್ ದಾಂಡಿಗರ ಮೇಲೆ ಸವಾರಿ ಮಾಡುತ್ತಿದ್ದು, ಕೇವಲ 59 ರನ್ ಗಳಿಗೆ ಇಂಗ್ಲೆಂಡ್ ನ 7 ವಿಕೆಟ್ ಗಳು ಪತನವಾಗಿವೆ. ಈ ಪಂದ್ಯದಲ್ಲಿ ಬುಮ್ರಾ 4 ವಿಕೆಟ್ ಕಬಳಿಸಿದ್ದು ಆ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

2002ರಿಂದ ಈ ವರೆಗೂ ನಡೆದ ಏಕದಿನ ಪಂದ್ಯಗಳಲ್ಲಿ ಮೊದಲ 10 ಓವರ್ ನಲ್ಲಿಯೇ 4 ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಪಟ್ಟಿಯಲ್ಲಿ ಬುಮ್ರಾ ಮೂರನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು 2003ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಜಾವಗಲ್ ಶ್ರೀನಾಥ್ ಮೊದಲ 10 ಓವರ್ ನಲ್ಲಿಯೇ 4 ವಿಕೆಟ್ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದರು. ಬಳಿಕ 2013ರಲ್ಲಿ ಭುವನೇಶ್ವರ್ ಕುಮಾರ್ ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.

ಇದೀಗ ದಿ ಓವಲ್ ಕ್ರೀಡಾಂಗಣದಲ್ಲಿ ಜಸ್ ಪ್ರೀತ್ 4 ವಿಕೆಟ್ ಪಡೆಯುವ ಮೂಲಕ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇನ್ನು ಇತ್ತೀಚಿನ ವರದಿಗಳು ಬಂದಾಗ ಇಂಗ್ಲೆಂಡ್ ತಂಡ 16.3 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ. 
 

SCROLL FOR NEXT