ಕ್ರಿಕೆಟ್

ICC ಏಕದಿನ ರ್ಯಾಂಕಿಂಗ್: ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ, ಪಾಕ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಭಾರತ

Srinivasamurthy VN

ದುಬೈ: ಕೆನ್ನಿಂಗ್ಟನ್‌ ಓವರ್ ಕ್ರೀಡಾಂಗಣದಲ್ಲಿ ಮಂಗಳವಾರ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ 10 ವಿಕೆಟ್ ಗಳ ಜಯ ದಾಖಲಿಸಿದ ಭಾರತ ICC ಏಕದಿನ ರ್ಯಾಂಕಿಂಗ್ ನಲ್ಲಿ ಭಡ್ತಿ ಪಡೆದಿದ್ದು, ಮೂರನೇ ಸ್ಥಾನಕ್ಕೇರಿದೆ.

ಹೌದು..ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಏಕದಿನ ರ್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಅದರಂತೆ ಈ ಹಿಂದೆ ನಾಲ್ತನೇ ಸ್ಥಾನದಲ್ಲಿದ್ದ ಭಾರತ ಇದೀಗ ಮೂರನೇ ಸ್ಥಾನಕ್ಕೇರಿದೆ. ಮೂರನೇ ಸ್ಥಾನದಲ್ಲಿದ್ದ ಪಾಕಿಸ್ತಾನ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಇದಕ್ಕೂ ಮುನ್ನ ಭಾರತ 105 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 106 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ, ಭಾರತವು ಇನ್ನೂ ಎರಡು ರೇಟಿಂಗ್ ಅಂಕಗಳನ್ನು ಪಡೆದುಕೊಂಡಿದ್ದು, ಒಟ್ಟು 108 ಅಂಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಆ ಮೂಲಕ ಪಾಕಿಸ್ತಾನವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿ ಭಾರತ ಮೂರನೇ ಸ್ಥಾನಕ್ಕೇರಿದೆ. 

ಇನ್ನು ನ್ಯೂಜಿಲೆಂಡ್ 126 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಇಂಗ್ಲೆಂಡ್ 122 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 

ಇನ್ನು ಭಾರತ ಈ ತಿಂಗಳು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಇನ್ನೂ ಎರಡು ODIಗಳು ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನಾಡಲಿದ್ದು, ಆ ಮೂಲಕ ಭಾರತವು ತನ್ನ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸುವ ಅವಕಾಶವನ್ನು ಹೊಂದಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಎರಡು ಏಕದಿನ ಪಂದ್ಯಗಳಲ್ಲಿ ಸೋತರೆ ಮತ್ತೆ ನಾಲ್ಕನೇ ಸ್ಥಾನಕ್ಕೆ ಕುಸಿಯಬಹುದು. ಪಾಕಿಸ್ತಾನದ ಮುಂದಿನ ODI ನಿಯೋಜನೆ ಮುಂದಿನ ತಿಂಗಳು ನೆದರ್ಲೆಂಡ್ಸ್ ವಿರುದ್ಧ ಮೂರು ಪಂದ್ಯಗಳ ಸರಣಿಯಾಗಿದೆ.

SCROLL FOR NEXT