ಕ್ರಿಕೆಟ್

ತಮ್ಮ ಸಿಕ್ಸರ್ ನಿಂದ ಗಾಯಗೊಂಡಿದ್ದ ಬಾಲಕಿ ಭೇಟಿ ಮಾಡಿದ ರೋಹಿತ್ ಶರ್ಮಾ; ಟೀಮ್ ಇಂಗ್ಲೆಂಡ್ ನಿಂದ ಜೆರ್ಸಿ ಉಡುಗೊರೆ

Lingaraj Badiger

ಲಂಡನ್: ಲಂಡನ್‌ನ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮಂಗಳವಾರ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಅದ್ಭುತ ಅರ್ಧಶತಕದೊಂದಿಗೆ ಫಾರ್ಮ್‌ಗೆ ಮರಳಿದರು. ಆದಾಗ್ಯೂ ಪಂದ್ಯದ ವೇಳೆ ಅವರು ಹೊಡೆದ ಸಿಕ್ಸರ್ ಬಾಲ್ ಪಂದ್ಯ ವೀಕ್ಷಿಸ್ತಿದ್ದ 6 ವರ್ಷದ ಬಾಲಕಿ ಬೆನ್ನಿಗೆ ಅಪ್ಪಳಿಸಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ವೈದ್ಯಕೀಯ ತಂಡವು ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡುವಾಗ ಕೆಲವು ನಿಮಿಷಗಳ ಕಾಲ ಆಟವನ್ನು ನಿಲ್ಲಿಸಲಾಯಿತು.

ಡೇವಿಡ್ ವಿಲ್ಲಿ ಎಸೆದ ಐದನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಪಂದ್ಯದ ಬಳಿಕ ರೋಹಿತ್ ಶರ್ಮಾ ಅವರು ಬಾಲ್ ಹೊಡೆತದಿಂದ ಗಾಯಗೊಂಡಿದ್ದ ಬಾಲಕಿಯನ್ನ ಭೇಟಿಯಾದರು. ಈ ಫೋಟೋ ಇದೀಗ ವೈರಲ್ ಆಗ್ತಿದೆ.  ಸೋಷಿಯಲ್ ಮೀಡಿಯಾ ಪೋಸ್ಟ್ ಪ್ರಕಾರ, ಪಂದ್ಯದ ನಂತರ ರೋಹಿತ್ ಶರ್ಮಾ ಅವರು 6 ವರ್ಷದ ಮೀರಾ ಸಾಲ್ವಿ ಎಂದು ಗುರುತಿಸಲಾದ ಬಾಲಕಿಯನ್ನ ಭೇಟಿಯಾಗಿ ಆಕೆಗೆ ಚಾಕೊಲೇಟ್ ನೀಡಿದ್ದಾರೆ. ಭಾರತ ತಂಡದ ನಾಯಕನ ಈ ನಡೆ ಕ್ರಿಕೆಟ್ ಭ್ರಾತೃತ್ವದ ಹೃದಯಗಳನ್ನು ಗೆದ್ದಿದೆ. ಹಲವು ಬಳಕೆದಾರರು ರೋಹಿತ್ ಶರ್ಮಾ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವಿಟ್ಟರ್ ಪೋಸ್ಟ್ ಕೂಡ ಪಂದ್ಯದ ನಂತರ ಟೀಮ್ ಇಂಗ್ಲೆಂಡ್ ಬಾಲಕಿಗೆ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದೆ ಎಂದು ಬಹಿರಂಗಪಡಿಸಿದೆ. ರೋಹಿತ್ ಶರ್ಮಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡದಿಂದ ಉಡುಗೊರೆಗಳನ್ನು ಸ್ವೀಕರಿಸಿದ ನಂತರ ಬಾಲಕಿ ನಗುತ್ತಿರುವ ಫೋಟೋ ಕೂಡ ವೈರಲ್ ಆಗಿದೆ.

SCROLL FOR NEXT