ಕ್ರಿಕೆಟ್

ಐಸಿಸಿ ಏಕದಿನ ರ್ಯಾಂಕಿಂಗ್: 2ನೇ ಸ್ಥಾನಕ್ಕೆ ಕುಸಿದ ಬುಮ್ರಾ, 13 ಸ್ಥಾನ ಮೇಲೇರಿ 8ನೇ ಸ್ಥಾನಕ್ಕೇರಿದ ಪಾಂಡ್ಯಾ

Srinivasamurthy VN

ದುಬೈ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡದ ಆಟಗಾರರ ಶ್ರೇಯಾಂಕ ಬದಲಾವಣೆಯಾಗಿದ್ದು, ಜಸ್ ಪ್ರೀತ್ ಬುಮ್ರಾ 2ನೇ ಸ್ಥಾನಕ್ಕೆ ಕುಸಿದಿದ್ದು, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಬರೊಬ್ಬರಿ 13 ಸ್ಥಾನ ಮೇಲೇರಿ ಟಾಪ್ 10ರೊಳಗೆ ಸ್ಥಾನ ಗಿಟ್ಟಿಸಿದ್ದಾರೆ.

ಹೌದು.. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಬೌಲರ್ ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದರೆ, ಹಾರ್ದಿಕ್ ಪಾಂಡ್ಯ ಅವರು ಬುಧವಾರ ಬಿಡುಗಡೆ ಮಾಡಿದ ಇತ್ತೀಚಿನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಇಂಗ್ಲೆಂಡ್ ವಿರುದ್ಧದ ಪ್ರಬಲ ಪ್ರದರ್ಶನದ ನಂತರ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 13 ಸ್ಥಾನಗಳ ಏರಿಕೆ ಕಂಡು ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತವು 2-1 ರ ವಿಜಯವನ್ನು ಸಾಧಿಸಿದರೆ, ಸ್ಟಾರ್ ವೇಗಿ ಬುಮ್ರಾ ಬೆನ್ನಿನ ಸೆಳೆತದಿಂದಾಗಿ ಅಂತಿಮ ಪಂದ್ಯವನ್ನು ಮಿಸ್ ಮಾಡಿಕೊಳ್ಳಬೇಕಾಯಿತು. ಪರಿಣಾಮ ಅವರು ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡು 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಬುಮ್ರಾ ಅವರ 703 ರ ವಿರುದ್ಧ 704 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನವನ್ನು ಮರಳಿ ಪಡೆದಿದ್ದಾರೆ.

ಬೌಲರ್ ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಏಳು ವಿಕೆಟ್‌ಗಳನ್ನು ಪಡೆದ ಯುಜ್ವೇಂದ್ರ ಚಹಾಲ್ ನಾಲ್ಕು ಸ್ಥಾನಗಳ ಮೇಲೇರಿ 16 ನೇ ಸ್ಥಾನಕ್ಕೆ ತಲುಪಿದ್ದು, ಇಂಗ್ಲೆಂಡ್ ವಿರುದ್ಧ ಪ್ರಭಾವಿ ಆಲ್ರೌಂಡ್ ಪ್ರದರ್ಶನ ನೀಡಿ ಸರಣಿ ಜಯದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಪಾಂಡ್ಯ 13 ಸ್ಥಾನ ಮೇಲೇರಿ 8ನೇ ಸ್ಥಾನಕ್ಕೇರಿದ್ದಾರೆ. ಆಲ್ರೌಂಡ್ ಮಾತ್ರವಲ್ಲದೇ ಬ್ಯಾಟಿಂಗ್ ಶ್ರೇಯಾಂಕದಲ್ಲೂ ಪಾಂಡ್ಯಾ ಎಂಟು ಸ್ಥಾನ ಮೇಲೇರಿ 42 ನೇ ಸ್ಥಾನ ಗಳಿಸಿದ್ದಾರೆ.

ಅಂತಿಮ ಪಂದ್ಯದಲ್ಲಿ ಅಜೇಯ 125 ರನ್ ಗಳಿಸಿದ ಸ್ಟಾರ್ ಇಂಡಿಯಾ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್, 25 ಸ್ಥಾನಗಳ ಏರಿಕೆಯೊಂದಿಗೆ 52 ನೇ ಸ್ಥಾನ ಪಡೆದಿದ್ದಾರೆ.

ಉಳಿದಂತೆ ಬ್ಯಾಟರ್ ಗಳ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಭಾರತದ ಜೋಡಿ ವಿರಾಟ್ ಕೊಹ್ಲಿ (ನಾಲ್ಕನೇ) ಮತ್ತು ರೋಹಿತ್ ಶರ್ಮಾ (ಐದನೇ) ಮತ್ತು ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ (ಆರನೇ) ಎಲ್ಲರೂ ಒಂದೊಂದು ಸ್ಥಾನ ಕಳೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮಂಗಳವಾರ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ತಮ್ಮ ಮೂರನೇ ODI ಶತಕವನ್ನು ಬಾರಿಸಿ ಬ್ಯಾಟರ್ ಶ್ರೇಯಾಂಕದಲ್ಲಿ ಒಟ್ಟಾರೆ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಾಲ್ಕು ಸ್ಥಾನಗಳನ್ನು ಕಳೆದುಕೊಂಡಿದ್ದು, ಆಲ್‌ರೌಂಡರ್‌ಗಳ ಅಗ್ರ 10 ರಿಂದ 11 ನೇ ಸ್ಥಾನಕ್ಕೆ  ಕುಸಿದಿದ್ದಾರೆ. ಮತ್ತೋರ್ವ ಇಂಗ್ಲೆಂಡ್ ಆಟಗಾರಕ್ರಿಸ್ ವೋಕ್ಸ್ ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡಿದ್ದಾರೆ.  
 

SCROLL FOR NEXT