ಕ್ರಿಕೆಟ್

ಐಸಿಸಿ ಟಿ20ಐ ರ್ಯಾಂಕಿಂಗ್: ಏಳನೇ ಸ್ಥಾನ ಜಿಗಿದ ಇಶಾನ್ ಕಿಶನ್

Lingaraj Badiger

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಬುಧವಾರ ಪರಿಷ್ಕೃತ ಟಿ20ಐ ರ್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಭಾರತ ತಂಡದ ಬ್ಯಾಟರ್ ಇಶಾನ್ ಕಿಶನ್ ಅವರು ಏಳನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮೂಲಕ ಬ್ಯಾಟ್ಸ್ ಮನ್‌ಗಳ ರ್ಯಾಂಕಿಂಗ್‌ನಲ್ಲಿ ಟಾಪ್-10 ರೊಳಗೆ ಪ್ರವೇಶ ಪಡೆದಿದ್ದು, ಶ್ರೇಯಾಂಕದಲ್ಲಿ ಅಗ್ರ ಹತ್ತು ಸ್ಥಾನದೊಳಗೆ ಪ್ರವೇಶ ಪಡೆದ ಏಕೈಕ ಭಾರತೀಯ ಎಂಬ ಖ್ಯಾತಿಗೆ ಇಶಾನ್ ಪಾತ್ರರಾಗಿದ್ದಾರೆ. ಇಶಾನ್ ಅವರು ಸರಿ ಸುಮಾರು 68 ಸ್ಥಾನಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.

ಇಶಾನ್ ಕಿಶನ್ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ T20I ಸರಣಿಯಲ್ಲಿ ಭಾರತದ ಅಗ್ರ ರನ್ ಸ್ಕೋರರ್ ಆಗಿದ್ದಾರೆ. ಇದುವರೆಗೆ 3 ಪಂದ್ಯಗಳಿಂದ ಎರಡು ಅರ್ಧಶತಕ ಸೇರಿದಂತೆ 164 ರನ್ ಗಳಿಸಿದ್ದಾರೆ. ಐಪಿಎಲ್‌ಗೂ ಮುನ್ನ ಇಶಾನ್ ಕಿಶನ್ ಶ್ರೀಲಂಕಾ ವಿರುದ್ಧದ ಟಿ20ಯಲ್ಲಿ 89 ರನ್ ಗಳಿಸಿ ಮಿಂಚಿದ್ದರು.

ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ ರೂ 15.25 ಕೋಟಿಗೆ ಪಡೆದುಕೊಂಡಿತ್ತು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಕ್-ಟು-ಬ್ಯಾಕ್ ಅರ್ಧಶತಕಗಳನ್ನು ಬಾರಿಸಿದ ನಂತರ ಪ್ರದರ್ಶನದಲ್ಲಿ ಇಳಿಮುಖ ಕಂಡಿತು.

ಏತನ್ಮಧ್ಯೆ, ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಟಿ೨೦ಐ ಬ್ಯಾಟರ್ ಗಳಿಗಾಗಿ ಐಸಿಸಿ ಶ್ರೇಯಾಂಕದಲ್ಲಿ ತನ್ನ ನಂ.1 ಸ್ಥಾನವನ್ನು ಉಳಿಸಿಕೊಂಡರು. ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಅವರನ್ನು ಹಿಂದೆ ತಳ್ಳಿದ ಮೊಹಮ್ಮದ್ ರಿಜ್ವಾನ್ ಎರಡನೇ ಸ್ಥಾನಕ್ಕೆ ಏರಿದರು. ಆಸ್ಟ್ರೇಲಿಯದ ಆರನ್ ಫಿಂಚ್ ಕೂಡ ಶ್ರೇಯಾಂಕದಲ್ಲಿ ನಂ.5 ತಲುಪಿದ್ದಾರೆ.

SCROLL FOR NEXT