ಕ್ರಿಕೆಟ್

ದಕ್ಷಿಣ ಆಫ್ರಿಕಾ- ಭಾರತ ಪಂದ್ಯ: ಬೆಂಗಳೂರಲ್ಲಿ ಗೆದ್ದರೆ ಇತಿಹಾಸ, ಪಿಚ್ ಹೇಗಿರಲಿದೆ?

Nagaraja AB

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಭಾರತ- ದಕ್ಷಿಣ ಆಫ್ರಿಕಾ ನಡುವಿನ ಐದನೇ  ಮತ್ತು ಅಂತಿಮ ಟಿ-20 ಪಂದ್ಯ ನಡೆಯಲಿದೆ.  ಐದು ಪಂದ್ಯಗಳ ಸರಣಿ ಸದ್ಯ 2-2 ರಲ್ಲಿ ಸಮಬಲಗೊಂಡಿದೆ. ಟೀಂ ಇಂಡಿಯಾಗೆ ಇತಿಹಾಸ ಸೃಷ್ಟಿಸುವ ಅವಕಾಶ ಸಿಕ್ಕಿದೆ. ಇಲ್ಲಿಯವರೆಗೆ ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಟಿ-20 ಸರಣಿಯಲ್ಲಿ ಸೋಲಿಸಲು ಸಾಧ್ಯವಾಗಿಲ್ಲ.

 ಮೊದಲ ಬಾರಿಗೆ 2015-16 ರಲ್ಲಿ ಟಿ-20 ಸರಣಿ ಆಡಲು  ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬಂದಿತ್ತು. ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ 2-0 ಅಂತರದಿಂದ ಸೋಲನುಭವಿಸಬೇಕಾಯಿತು. ಕೊನೆಯ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಸರಣಿಗೆ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದರು.

ಇದಾದ ಬಳಿಕ ದಕ್ಷಿಣ ಆಫಿಕಾ ತಂಡ 2019-20 ರಲ್ಲಿ ಟಿ-20 ಸರಣಿ ಆಡಲು ಭಾರತಕ್ಕೆ ಬಂದಿತ್ತು. ಈ ಸರಣಿಗೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು. ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡು ಒಂದು ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದೀಗ ಇಂದು ಟೀಂ ಇಂಡಿಯಾಕ್ಕೆ ಚೊಚ್ಚಲ ನಾಯಕತ್ವ ವಹಿಸಿರುವ ರಿಷಭ್ ಪಂತ್ ಗೆ ಪಂದ್ಯ ಗೆಲ್ಲುವ ಜೊತೆಗೆ ಇತಿಹಾಸದಲ್ಲಿ ಹೆಸರು ದಾಖಲಿಸುವ ಸುವರ್ಣಾವಕಾಶ ಒದಗಿ ಬಂದಿದೆ.

ಹವಾಮಾನ  ಇಂದು ಸಹ ಐದನೇ ಟಿ-20 ಪಂದ್ಯದಲ್ಲಿ ಮಳೆಯೇ ನಿರ್ಣಾಯಕವಾಗಲಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಬೆಂಗಳೂರಿನಲ್ಲಿ ಭಾನುವಾರ ದಿನವಿಡೀ ಮಳೆಯಾಗುವ ಸಾಧ್ಯತೆಯಿದೆ. Accuweather ಪ್ರಕಾರ, ಬೆಂಗಳೂರಿನಲ್ಲಿ ಭಾನುವಾರ ಸಂಜೆ ತಾಪಮಾನ 21 ಡಿಗ್ರಿ ಇರಲಿದ್ದು, ಮಳೆಯ ಸಂಭವನೀಯತೆ ಶೇಕಡಾ 50ಕ್ಕಿಂತ ಹೆಚ್ಚು.

ಪಿಚ್ ಹೇಗಿರಲಿದೆ: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟ್ಸ್ ಮನ್ ಗಳಿಗೆ ನೆರವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಬೇಕು. ಏಕೆಂದರೆ ಇಲ್ಲಿ ಗುರಿ ಬೆನ್ನಟ್ಟುವುದು ತುಂಬಾ ಸುಲಭ. ಇನ್ನು ಸ್ಪಿನ್ ಬೌಲರ್ ಗಳಿಗೆ ಈ ಪಿಚ್ ಸಹಕಾರ ನೀಡುವ ಸಾಧ್ಯತೆಯಿದೆ.

ಎರಡು ತಂಡಗಳ ನಡುವೆ ಇದುವರೆಗೆ 19 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದ್ದು, ಅದರಲ್ಲಿ ಟೀಂ ಇಂಡಿಯಾ 11 ಪಂದ್ಯಗಳನ್ನು ಗೆದಿದ್ದರೆ ದಕ್ಷಿಣ ಆಫ್ರಿಕಾ ಎಂಟು ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎರಡೂ ತಂಡಗಳು ಎಂಟು ಬಾರಿ ಭಾರತದ ನೆಲದಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ ಐದು ಪಂದ್ಯಗಳನ್ನು ಗೆದ್ದಿದ್ದು, ಭಾರತ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ.

SCROLL FOR NEXT