ಕ್ರಿಕೆಟ್

ಟಿ20 ವಿಶ್ವಕಪ್: ಬಾಂಗ್ಲಾದೇಶ vs ಭಾರತ ಪಂದ್ಯಕ್ಕೆ ಮಳೆಕಾಟ; ಓವರ್ ಕಡಿತ, ಬಾಂಗ್ಲಾಗೆ 16 ಓವರ್ ನಲ್ಲಿ 151 ರನ್ ಗುರಿ

Srinivasamurthy VN

ಅಡಿಲೇಡ್: ಅಡಿಲೇಡ್ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ಮಳೆ ಕಾಟ ಎದುರಾಗಿದ್ದು, ಡಕ್ವರ್ತ್ ಲೂಯಿಸ್ ನಿಯಮದನ್ವಯ ಓವರ್ ಗಳ ಕಡಿತ ಮಾಡಿ ಬಾಂಗ್ಲಾದೇಶಕ್ಕೆ 16 ಓವರ್ ನಲ್ಲಿ 151 ರನ್ ಗುರಿ ನಿಗದಿ ಪಡಿಸಲಾಗಿದೆ.

ಟೀಂ ಇಂಡಿಯಾ ನೀಡಿದ್ದ 185ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ ಭರ್ಜರಿ ಆರಂಭ ಪಡೆದಿತ್ತು. ಬಾಂಗ್ಲಾಪರ ಆರಂಭಿಕ ಆಟಗಾರ ಲಿಟನ್ ದಾಸ್ ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 60ರನ್ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಜ್ಮಲ್ ಹುಸೇನ್ ಶಾಂತೋ 25 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 21 ರನ್ ಗಳಿಸಿದರು. ಇಬ್ಬರೂ ಅಪಾಯಕಾರಿಯಾಗುತ್ತಿದ್ದಾರೆ ಎನ್ನುವ ಹೊತ್ತಿಗೆ ಮಳೆ ಆಗಮಿಸಿತು. ಸುಮಾರು ಅರ್ಧಗಂಟೆಗಳ ಕಾಲ ಸುರಿದ ಮಳೆ ಬಳಿಕ ನಿಂತಿತು. 

ಈ ಹಂತದಲ್ಲಿ ಮೈದಾನಕ್ಕಿಳಿದ ಅಂಪೈರ್ ಗಳು ಬಾಂಗ್ಲಾ ಇನ್ನಿಂಗ್ಸ್ ಮೊಟಕುಗೊಳಿಸಲು ಮುಂದಾದರು. ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಬಾಂಗ್ಲಾಗೆ 16 ಓವರ್ ನಲ್ಲಿ 151ರನ್ ಗಳ ಗುರಿ ನೀಡಲಾಯಿತು. ಈ ಹಂತದಲ್ಲಿ ಕಣಕ್ಕಿಳಿದ ಬಾಂಗ್ಲಾದೇಶಕ್ಕೆ ಆರಂಭದಲ್ಲೇ ಭಾರತ ಆಘಾತ ನೀಡಿತು. 60ರನ್ ಗಳಿಸಿ ಅಪಾಯಕಾರಿಯಾಗಿದ್ದ ಲಿಟನ್ ದಾಸ್ ರನ್ನು ಕೆಎಲ್ ರಾಹುಲ್ ರನೌಟ್ ಮಾಡಿದರು. ಇವರ ಬೆನ್ನಲ್ಲೇ ಮತ್ತೋರ್ವ ಆಟಗಾರ ನಜ್ಮಲ್ ಹುಸೇನ್ ಶಾಂತೋ ಕೂಡ 21 ರನ್ ಗಳಿಸಿ ಶಮಿ ಬೌಲಿಂಗ್ ನಲ್ಲಿ ಔಟಾದರು. 
 

SCROLL FOR NEXT