ಕ್ರಿಕೆಟ್

ಟಿ20 ವಿಶ್ವಕಪ್: ರಾಹುಲ್-ಕೊಹ್ಲಿ ಅರ್ಧಶತಕ: ಬಾಂಗ್ಲಾದೇಶಕ್ಕೆ ಗೆಲ್ಲಲು 185 ರನ್ ಗುರಿ ನೀಡಿದ ಭಾರತ

Srinivasamurthy VN

ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ರ ಪುರುಷರ ಟಿ20 ವಿಶ್ವಕಪ್‌ ಟೂರ್ನಿಯ ಗ್ರೂಪ್ 2ನ 2ನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 185ರನ್ ಗಳ ಗುರಿ ನೀಡಿದೆ.

ಆಸ್ಚ್ರೇಲಿಯಾದ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭಿಕ ಆಘಾತದ ಹೊರತಾಗಿಯೂ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕ ಹಾಗೂ ಸೂರ್ಯ ಕುಮಾರ್ ಯಾದವ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್  ಕಲೆ ಹಾಕಿದೆ.

ಭಾರತದ ಪರ ಕೆಎಲ್ ರಾಹುಲ್ 32 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿಗಳ ನೆರವಿನಿಂದ 50 ರನ್ ಗಳನ್ನು ಸಿಡಿಸಿ ಔಟಾದರು. ರಾಹುಲ್ ಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ ಕೂಡ 44 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ  ಬೌಂಡರಿಗಳ ನೆರವಿನಿಂದ ಅಜೇಯ 64ರನ್ ಗಳನ್ನು ಕಲೆಹಾಕಿದರು. ರಾಹುಲ್ ನಿರ್ಗಮನದ ಬಳಿಕ ಕೊಹ್ಲಿ ಜೊತೆಗೂಡಿದ್ದ ಸೂರ್ಯ ಕುಮಾರ್ ಯಾದವ್ ಕೂಡ ಕೇವಲ 16 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 30 ರನ್ ಕಲೆಹಾಕಿ ಭಾರತದ ಸವಾಲಿನ ಮೊತ್ತದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ ಕೇವಲ 2ರನ್ ಗೆ ಔಟಾದರೆ, ಸ್ಫೋಟಕ ಬ್ಯಾಟರ್ ಹಾರ್ದಿಕ್ ಪಾಂಡ್ಯಾ 5, ಅಕ್ಸರ್ ಪಟೇಲ್ 7 ರನ್ ಸಿಡಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಭಾರತ ತಂಡದ ಸ್ಪೆಷ್ಟಲಿಸ್ಟ್ ಬ್ಯಾಟರ್ ದಿನೇಶ್ ಕಾರ್ತಿಕ್ 7 ರನ್ ಗಳಿಸಿದ್ದಾಗ ರನೌಟ್ ಗೆ ಬಲಿಯಾಗಿದ್ದು ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದಂತಾಯಿತು. ಬಳಿಕ ಕೊಹ್ಲಿ ಜೊತೆಗೂಡಿದ ಅಶ್ವಿನ್ 13ರನ್ ಗಳಿಸಿ ಭಾರತ ಮೊತ್ತ 180ರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಬಾಂಗ್ಲಾದೇಶಕ್ಕೆ ಗೆಲ್ಲಲು 185 ರನ್ ಗಳ ಸವಾಲಿನ ಗುರಿ ನೀಡಿದೆ.

ಬಾಂಗ್ಲಾದೇಶ ಪರ ಹಸನ್ ಮುಹಮದ್ 3 ವಿಕೆಟ್ ಪಡೆದು ಮಂಚಿದರೆ, ನಾಯಕ ಶಕೀಬ್ 2 ವಿಕೆಟ್ ಪಡೆದರು.
 

SCROLL FOR NEXT