ಕ್ರಿಕೆಟ್

ಟಿ20 ವಿಶ್ವಕಪ್: ಭಾರತ ಮಣಿಸಿದರೆ ಜಿಂಬಾಬ್ವೆ ಹುಡುಗನ ಮದುವೆಯಾಗುತ್ತೇನೆ: ಪಾಕ್ ನಟಿಯ ಓಪನ್ ಆಫರ್!

Srinivasamurthy VN

ಸಿಡ್ನಿ: ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ತಂಡ ಭಾರತ ತಂಡವನ್ನು ಸೋಲಿಸಿದರೆ ತಾನು ಜಿಂಬಾಬ್ವೆ ಹುಡುಗನನ್ನು ಮದುವೆಯಾಗುತ್ತೇನೆ ಎಂದು ಪಾಕಿಸ್ತಾನದ ನಟಿಯೊಬ್ಬರು ಓಪನ್ ಆಫರ್ ನೀಡಿದ್ದಾರೆ.

ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತು ಟೂರ್ನಿಯಿಂದಲೇ ನಿರ್ಗಮಿಸುವ ಹೊಸ್ತಿಲಲ್ಲಿರುವ ಪಾಕಿಸ್ತಾನ ತಂಡದ ಸೆಮೀಸ್ ಕನಸು ಇದೀಗ ಇತರೆ ತಂಡಗಳ ಫಲಿತಾಂಶದ ಮೇಲೆ ನಿಂತಿದ್ದು, ಇದೇ ಕಾರಣಕ್ಕೆ ಇದೀಗ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಇತರೆ ತಂಡಗಳ ಆಟಗಾರರಿಗೆ ತರಹೇವಾರಿ ಆಫರ್ ಗಳನ್ನು ನೀಡಿ ಸುದ್ದಿಯಾಗುತ್ತಿದ್ದಾರೆ.

ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಪಾಕಿಸ್ತಾನದ ನಟಿಯೊಬ್ಬರು ಟಿ20 ವಿಶ್ವಕಪ್ ನ ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಭಾರತ ತಂಡವನ್ನು ಸೋಲಿಸಿದರೆ ತಾನು ಜಿಂಬಾಬ್ವೆ ಹುಡುಗನನ್ನು ಮದುವೆಯಾಗುತ್ತೇನೆ ಎಂದು ಆಫರ್ ನೀಡಿದ್ದಾರೆ. ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಈ ಕುರಿತು ಟ್ವೀಟ್ ಮಾಡಿದ್ದು, 'ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ಭಾರತವನ್ನು "ಅದ್ಭುತವಾಗಿ" ಸೋಲಿಸಿದರೆ, ತಾನು ಆಫ್ರಿಕನ್ ದೇಶದ ವ್ಯಕ್ತಿಯನ್ನು ಮದುವೆಯಾಗುತ್ತೇನೆ ಎಂದು ಶಿನ್ವಾರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 

ಅವರ ಈ ಪೋಸ್ಟ್ ವೈರಲ್ ಆಗಿದ್ದು, ಈ ವರೆಗೂ ಈ ಪೋಸ್ಟ್ ಗೆ 850 ಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದು, 49 ರಿಟ್ವೀಟ್‌ಗಳು ಬಂದಿವೆ. ಅಂತೆಯೇ ಅವರ ಹೇಳಿಕೆಯನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದು, ಹಾಗಾದರೆ ನಿಮ್ಮ ಇಡೀ ಜೀವನವನ್ನು ನೀವು ಹೇಗೆ ಏಕಾಂಗಿಯಾಗಿ ಬದುಕುತ್ತೀರಿ ಎಂದು ನಾನು ವಿಷಾದಿಸುತ್ತೇನೆ" ಎಂದು ಒಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಅಂತೆಯೇ ಈ ಹಿಂದೆ ಬಾಂಗ್ಲಾದೇಶ ವಿರುದ್ಧದ ಭಾರತದ ಪಂದ್ಯದ ವೇಳೆ, ಇದೇ ನಟಿ ನಿರಂತರವಾಗಿ ಟ್ವೀಟ್ ಮಾಡಿ ಭಾರತ ಪಂದ್ಯವನ್ನು ಸೋಲಲಿ ಎಂದು ಹಾರೈಸುತ್ತಿದ್ದರು. ಅಲ್ಲದೆ ಭಾರತ ಬಾಂಗ್ಲಾದೇಶವನ್ನು ಸೋಲಿಸಿದರೆ ತಾನು ತನ್ನ ಖಾತೆಯನ್ನು ಅಳಿಸಿ ಹಾಕುತ್ತೇನೆ ಎಂದು ಘೋಷಣೆ ಮಾಡಿದ್ದರು. ಆದರೆ ಪಂದ್ಯದ ಫಲಿತಾಂಶದ ಬಳಿಕ ನಟಿ ತಮ್ಮ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಇದೀಗ ಇದೇ ವಿಚಾರವಾಗಿಯೂ ಆಕೆಯ ಕಾಲೆಳಿದಿರುವ ಬಳಕೆದಾರರೊಬ್ಬರು, ಭಾರತವು ಬಾಂಗ್ಲಾದೇಶವನ್ನು ಸೋಲಿಸಿದರೆ ನೀವು ನಿಮ್ಮ ಟ್ವಿಟರ್ ಖಾತೆಯನ್ನು ಅಳಿಸಬೇಕಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ನಟಿ ಸೆಹರ್ ಶಿನ್ವಾರಿ ಟ್ವೀಟ್‌ಗಳಿಂದ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಸರಣಿಯ ಮೊದಲ T20 ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ವಿಕೆಟ್‌ಗಳ ಸೋಲಿನ ನಂತರ ಅವರು ಟೀಮ್ ಇಂಡಿಯಾ ಕುರಿತು ಟ್ವೀಟ್ ಮಾಡಿದ್ದರು. 

ಇನ್ನು ಇದೇ ನವೆಂಬರ್ 6 ಅಂದರೆ ಭಾನುವಾರ ವಿಶ್ವ ಟಿ20 ವಿಶ್ವಕಪ್ ನಲ್ಲಿ ಭಾರತ-ಜಿಂಬಾಬ್ವೆ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಪಾಕಿಸ್ತಾನದ ಟೂರ್ನಿಯ ಭವಿಷ್ಯ ನಿರ್ಧರಿಸಲಿದ್ದು, ಈ ಪಂದ್ಯದಲ್ಲಿ ಭಾರತ ಗೆದ್ದರೆ ಪಾಕಿಸ್ತಾನ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

SCROLL FOR NEXT