ಕ್ರಿಕೆಟ್

2023ರ ಏಷ್ಯಾ ಕಪ್‌ಗಾಗಿ ಭಾರತ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ: ಜಯ್ ಶಾ ಸ್ಪಷ್ಟನೆ

Manjula VN

ಮುಂಬೈ: 2023ರ ಏಷ್ಯಾಕಪ್‌ಗಾಗಿ ಭಾರತ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. 

ಮುಂಬೈನಲ್ಲಿ ನಡೆದ 91ನೇ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಮಾತನಾಡಿದ ಅವರು, ಮುಂದಿನ ಏಷ್ಯಾಕಪ್​ಗಾಗಿ ಭಾರತ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಹೇಳಿದರು.

2023ರ ಏಷ್ಯಾ ಕಪ್  ಟೂರ್ನಿಯನ್ನು ಪಾಕಿಸ್ತಾನವು ಆಯೋಜಿಸಲಿದೆ. ಏಷ್ಯಾಕಪ್ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಿದರೆ ಭಾರತ ತಂಡವು ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ. ಬದಲಾಗಿ ಪಾಕ್ ಕ್ರಿಕೆಟ್ ಮಂಡಳಿ ಬೇರೆ ದೇಶದಲ್ಲಿ ಟೂರ್ನಿಯನ್ನು ಆಯೋಜಿಸಿದರೆ ಮಾತ್ರ ಟೀಂ ಇಂಡಿಯಾ ​ಭಾಗವಹಿಸಲಿದೆ ಎಂದು ತಿಳಿಸಿದರು.

ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಭಾರತ ಕೊನೆಯದಾಗಿ 2005-06ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ದ್ವಿಪಕ್ಷೀಯ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಇನ್ನು ಪಾಕಿಸ್ತಾನ ತಂಡವು 2012-13ರಲ್ಲಿ ಕೊನೆಯ ಬಾರಿ ಭಾರತದಲ್ಲಿ ಸರಣಿ ಆಡಿತ್ತು. ಇದಾದ ಬಳಿಕ ಉಭಯ ದೇಶಗಳು ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಿಲ್ಲ.

SCROLL FOR NEXT