ಕ್ರಿಕೆಟ್

ಟಿ20 ವಿಶ್ವಕಪ್: ನೆದರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್, ಗೆಲ್ಲಲು 180 ರನ್ ಗುರಿ

Srinivasamurthy VN

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ನ ಗ್ರೂಪ್ 2ರ ಇಂದಿನ 2ನೇ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಟೀಂ ಇಂಡಿಯಾ 179 ರನ್ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಅವರ ಅರ್ಧಶತಕಗಳ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ನೆದರ್ಲೆಂಡ್ ಗೆ ಗೆಲ್ಲಲು 180ರನ್  ಗಳ ಗುರಿ ನೀಡಿದೆ.

ಮೊದಲು ಬ್ಯಾಟಿಂಗ್ ಗೆ ಮುಂದಾದ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿತು. 9ರನ್ ಗಳಿಸಿದ್ದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಮೀಕೆರನ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕೊಹ್ಲಿ ಜೊತೆಗೂಡಿದ ರೋಹಿತ್ ಶರ್ಮಾ ರಕ್ಷಣಾತ್ಮಕ ಆಟವಾಡಿ 39 ಎಸೆತಗಳಲ್ಲಿ 53ರನ್ ಸಿಡಿಸಿ ಕ್ಲಾಸನ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕೊಹ್ಲಿ ಜೊತೆಗೂಡಿದ ಸೂರ್ಯ ಕುಮಾರ್ ಯಾದವ್ ತಂಡಕ್ಕೆ ಯಾವುದೇ ರೀತಿಯ ಅಪಾಯ ಎದುರಾಗದಂತೆ ಸ್ಫೋಟಕ ಆಟವಾಡಿದರು. 

ಈ ಹಂತದಲ್ಲಿ ಕೊಹ್ಲಿ 44 ಎಸೆತಗಳಲ್ಲಿ ಅಜೇಯ 62ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 51ರನ್ ಸಿಡಿಸಿದರು. ಇನ್ನಿಂಗ್ಸ್ ನ ಕೊನೆಯ ಎಸೆತದಲ್ಲಿ ಸೂರ್ಯ ಕುಮಾರ್ ಯಾದವ್ ಆರ್ಧಶತಕ ಸಿಡಿಸಿದ್ದು ವಿಶೇಷವಾಗಿತ್ತು. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ನೆದರ್ಲೆಂಡ್ ಗೆ 180ರನ್ ಗಳ ಬೃಹತ್ ಸವಾಲು ನೀಡಿದೆ. 

ನೆದರ್ಲೆಂಡ್ ಪರ ಕ್ಲಾಸನ್ ಮತ್ತು  ಮೀಕೆರನ್ ತಲಾ ಒಂದೊಂದು ವಿಕೆಟ್ ಪಡೆದರು.

SCROLL FOR NEXT