ಕ್ರಿಕೆಟ್

ಟಿ20 ವಿಶ್ವಕಪ್: ಫಿಲಿಪ್ಸ್ ಏಕಾಂಗಿ ಹೋರಾಟ, ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಗೆ 65 ರನ್ ಭರ್ಜರಿ ಜಯ

Srinivasamurthy VN

ಸಿಡ್ನಿ: ಗ್ಲೆನ್ ಫಿಲಿಪ್ಸ್ ಏಕಾಂಗಿ ಶತಕದ ಹೋರಾಟ ಹಾಗೂ ಟ್ರೆಂಟ್ ಬೌಲ್ಟ್ ಮಾರಕ ಬೌಲಿಂಗ್ ಪರಿಣಾಮ ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾ ತಂಡವನ್ನು 65 ರನ್ ಗಳ ಅಂತರದಲ್ಲಿ ಮಣಿಸಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ 168 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ 19.2 ಓವರ್ ನಲ್ಲಿ 102 ರನ್ ಗಳಿಗೇ ಆಲೌಟ್ ಆಗುವ ಮೂಲಕ 65 ರನ್ ಗಳ ಹೀನಾಯ ಸೋಲು ಕಂಡಿತು. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಲಂಕಾ ಬೌಲರ್ ಗಳ ಮಾರಕ ಬೌಲಿಂಗ್ ಗೆ ತತ್ತರಿಸಿತು. ಗ್ಲೆನ್ ಫಿಲಿಪ್ಸ್ (104) ಮತ್ತು ಮಿಚೆಲ್ (22) ಹೊರತುಪಡಿಸಿದರೆ ಉಳಿದೆಲ್ಲಾ ಆಟಗಾರರೂ ನೀರಸ ಪ್ರದರ್ಶನ ನೀಡಿದರು. ಐದು ಮಂದಿ ಪ್ರಮುಖ ಬ್ಯಾಟರ್ ಗಳು ಒಂದಂಕಿ ಮೊತ್ತಕ್ಕೆ ಔಟಾದರು. ಆದರೂ ಅಂತಿಮವಾಗಿ ನ್ಯೂಜಿಲೆಂಡ್ ಪಡೆ 20 ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಗಳನ್ನು ಪೇರಿಸಿತು. ಲಂಕಾ ಪರ ರಜಿತಾ 2 ವಿಕೆಟ್ ಮತ್ತು ತೀಕ್ಷಣ, ಧನಂಜಯ ಡಿಸಿಲ್ವಾ, ಹಸರಂಗ ಮತ್ತು ಲಾಹಿರು ಕುಮಾರ ತಲಾ ಒಂದು ವಿಕೆಟ್ ಪಡೆದರು.

ನ್ಯೂಜಿಲೆಂಡ್ ನೀಡಿದ 168ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಶ್ರೀಲಂಕಾ ಪಡೆ ಕೂಡ ನ್ಯೂಜಿಲೆಂಡ್ ಕರಾರುವಕ್ಕಾದ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕ ಆಟಗಾರ ನಿಸ್ಸಾಂಕ ಶೂನ್ಯಕ್ಕೇ ಔಟಾಗಿ ಆರಂಭಿಕ ಆಘಾತ ನೀಡಿದರು. ಬಳಿಕ ಕುಶಾಲ್ ಮೆಂಡಿಸ್ (4), ಧನಂಜಯ ಡಿಸಿಲ್ವಾ (0), ಚರಿತ ಅಸಲಂಕಾ (4) ಮತ್ತು ಕರುಣರತ್ನೆ (3) ಪೆವಿಲಿಯನ್ ಪರೇಡ್ ನಡೆಸಿದರು. ಈ ಹಂತದಲ್ಲಿ ಜೊತೆಗೂಡಿದ ಭನುಕ ರಾಜಪಕ್ಸ (34) ಮತ್ತು ನಾಯಕ ಶನಕ (35) ಲಂಕಾ ಕುಸಿತಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದರು. ಈ ಹಂತದಲ್ಲಿ ದಾಳಿಗಿಳಿದ ಫರ್ಗುಸನ್ 34 ರನ್ ಗಳಿಸಿದ್ದ ರಾಜಪಕ್ಸರನ್ನು ಪೆವಿಲಿಯನ್ ಗೆ ಅಟ್ಟಿದರು. ಬಳಿಕ 4 ರನ್ ಗಳಿಸಿದ್ದ ಹಸರಂಗ ಕೂಡ ಔಟಾದರು. 35 ರನ್ ಗಳಿಸಿದ್ದ ಶನಕ ಟ್ರೆಂಟ್ ಬೌಲ್ಟ್ ಬೌಲಿಂಗ್ ನಲ್ಲಿ ಔಟಾದರು. 

ಅಂತಿಮವಾಗಿ ಶ್ರೀಲಂಕಾ ತಂಡ 19.2 ಓವರ್ ನಲ್ಲಿ 102 ರನ್ ಗಳಿಗೆ ಆಲೌಟ್ ಆಗುವ ಮೂಲಕ 65 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 4 ವಿಕೆಟ್ ಪಡೆದು ಮಂಚಿದರೆ, ಸ್ಯಾಂಥನರ್ ಮತ್ತು ಸೋಧಿ ತಲಾ 2 ವಿಕೆಟ್ ಪಡೆದರು.

ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಅಂಕಗಳಿಕೆ 5ಕ್ಕೇರಿದ್ದು, ಸೆಮೀಸ್ ಹಂತಕ್ಕೆ ಮತ್ತಷ್ಟು ಹತ್ತಿರವಾಗಿದೆ. ಸೋಲು ಕಂಡ ಶ್ರೀಲಂಕಾ ಕೊನೆಯ ಸ್ಥಾನಕ್ಕೆ ಕುಸಿದಿದ್ದು, ಸೆಮೀಸ್ ಹಾದಿ ಕಠಿಣವಾಗಿದೆ.
 

SCROLL FOR NEXT