ಕ್ರಿಕೆಟ್

ರವೀಂದ್ರ ಜಡೇಜಾಗೆ ಗಾಯದ ಸಮಸ್ಯೆ: ಟಿ-20 ವಿಶ್ವಕಪ್ ನಿಂದ ಹೊರಗೆ

Nagaraja AB

ನವದೆಹಲಿ: ಟೀಂ ಇಂಡಿಯಾ ಹಿರಿಯ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ. ರವೀಂದ್ರ ಜಡೇಜಾ ಮೊಣಕಾಲಿನ ಗಾಯದ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ, ಇದರಿಂದಾಗಿ ಅವರು ಅನಿರ್ದಿಷ್ಟ ಅವಧಿಯವರೆಗೆ ಕ್ರಿಕೆಟ್ ಪಂದ್ಯದಿಂದ ದೂರವಿರುವ ಸಾಧ್ಯತೆಯಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಹಾಂಕ್ ಹಾಂಗ್ ವಿರುದ್ಧ ಎರಡು ಪಂದ್ಯಗಳನ್ನಾಡಿದ್ದ ರವೀಂದ್ರ ಜಡೇಜಾ, ತನ್ನ ಆಲ್ ರೌಂಡ್ ಸಾಮರ್ಥ್ಯದಿಂದ ತಂಡಕ್ಕೆ ಅಗತ್ಯ ಸಮತೋಲನ ನೀಡುತ್ತಿದ್ದರು. ಆದರೆ, ಮುಂದಿನ ಪಂದ್ಯಗಳಲ್ಲಿ ಅವರ ಅನುಪಸ್ಥಿತಿ ಭಾರತ ತಂಡದ ಮೇಲೆ ಪರಿಣಾಮ ಬೀರಲಿದೆ.

 ಜಡೇಜಾ ಅವರ ಬಲ ಮೊಣಕಾಲಿನ ಗಾಯ ಬಹಳ ಗಂಭೀರವಾಗಿದೆ. ಅವರು  ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದ್ದು, ಅನಿರ್ದಿಷ್ಟ ಅವಧಿಯವರೆಗೆ ಕ್ರಿಕೆಟ್ ಪಂದ್ಯ ಆಡಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ರವೀಂದ್ರ ಜಡೇಜಾ ಚೇತರಿಸಿಕೊಳ್ಳಲು ಆರು ತಿಂಗಳು ತೆಗೆದುಕೊಳ್ಳಬಹುದು. ಆದರೆ, ಕನಿಷ್ಠ ಮೂರು ತಿಂಗಳ ಕಾಲ ಕ್ರಿಕೆಟ್ ಆಟದಿಂದ ಹೊರಗುಳಿಯುವುದು ಖಚಿತ ಎನ್ನಲಾಗಿದೆ. ಜಡೇಜಾ ಅವರ ಮೊಣಕಾಲಿನ ಸಮಸ್ಯೆ ಬಹಳ ಸಮಯದಿಂದ ಇದೆ ಎಂದು ತಿಳಿದುಬಂದಿದೆ.

SCROLL FOR NEXT