ಕ್ರಿಕೆಟ್

ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ನೋಡಲು ಮುಗಿಬಿದ್ದ ಜನ; ಜಿಯೋ ಸಿನಿಮಾದಲ್ಲಿ ದಾಖಲೆಯ ವೀಕ್ಷಣೆ ಕಂಡ CSK-RCB ಪಂದ್ಯ

Ramyashree GN

ನವದೆಹಲಿ: ಈಗ ನಡೆಯುತ್ತಿರುವ ಐಪಿಎಲ್ 2023 ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯ ಜಿಯೋಸಿನಿಮಾದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. 

ಸಿಎಸ್‌ಕೆ ವಿರುದ್ಧದ ಆರ್‌ಸಿಬಿ ಪಂದ್ಯವು JioCinema ದಲ್ಲಿ ಏಕಕಾಲದಲ್ಲಿ ವೀಕ್ಷಕರ ಸಂಖ್ಯೆ 2.4 ಕೋಟಿಗೂ ಅಧಿಕವಾಗಿದ್ದು, ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದೆ.

ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ಮಾಡುವ ವೇಳೆ ಜಿಯೋಸಿನಿಮಾ ವೀಕ್ಷಕರ ಸಂಖ್ಯೆ 2.2 ಕೋಟಿ ತಲುಪಿದ್ದು ದಾಖಲೆಯಾಗಿತ್ತು. ಇದೀಗ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯವು ಈ ದಾಖಲೆಯನ್ನು ಸರಿಗಟ್ಟಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ 2023ರ 24ನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (36 ಎಸೆತಗಳಲ್ಲಿ 76) ಮತ್ತು ಫಾಫ್ ಡು ಪ್ಲೆಸಿಸ್ (33 ಎಸೆತಗಳಲ್ಲಿ 62) ಜೊತೆಯಾಟದಲ್ಲಿ ಸಿಎಸ್‌ಕೆ ಬೌಲರ್‌ಗಳನ್ನು ಕಾಡಿದರು. ಅಂತಿಮವಾಗಿ, ಸಿಎಸ್‌ಕೆ 8 ರನ್‌ಗಳಿಂದ ಜಯ ಸಾಧಿಸಿತು.

'ಪಂದ್ಯದ ಎರಡನೇ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಜಿಯೋಸಿನಿಮಾದಲ್ಲಿ ಏಕಕಾಲದ ವೀಕ್ಷಕರ ಸಂಖ್ಯೆ 2.4 ಕೋಟಿ ತಲುಪಿದೆ. ಜಿಯೋಸಿನಿಮಾ ಎಲ್ಲಾ ವೀಕ್ಷಕರಿಗೆ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ಸ್ಟ್ರೀಮಿಂಗ್ ಮಾಡುತ್ತಿದೆ' ಎಂದು ಸ್ಟ್ರೀಮಿಂಗ್ ವೇದಿಕೆ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಬಾರಿ ಐಪಿಎಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಹೊಂದಿದ್ದ ಡಿಸ್ನಿ+ಹಾಟ್‌ಸ್ಟಾರ್ ಹೊಂದಿದ್ದಕ್ಕಿಂತ JioCinema ದ ವೀಕ್ಷಣೆಯ ಸಂಖ್ಯೆಗಳು ಜಾಸ್ತಿಯಿವೆ. JioCinema ದಲ್ಲಿ ಸ್ಟ್ರೀಮಿಂಗ್ ಆದ ಐಪಿಎಲ್ 2023ರ ಆವೃತ್ತಿಯ ಆರಂಭಿಕ ಪಂದ್ಯಗಳು ಸಹ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಈ ಹಿಂದೆ ಪ್ರಸಾರವಾಗಿದ್ದ ಫೈನಲ್‌ ಪಂದ್ಯಗಳು ಕಂಡಿದ್ದಕ್ಕಿಂದ ಅಧಿಕ ವೀಕ್ಷಣೆಯನ್ನು ಕಂಡಿವೆ. 

'ಸ್ಟ್ರೀಮಿಂಗ್ ಅಪ್ಲಿಕೇಶನ್ ಪ್ರತಿದಿನವೂ ಐಪಿಎಲ್‌ಗಾಗಿ ಲಕ್ಷಾಂತರ ಹೊಸ ವೀಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ದಾಖಲಾದ ಅತ್ಯಧಿಕ ವೀಕ್ಷಕರ ಸಂಖ್ಯೆ 2019ರ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಫೈನಲ್ ಪಂದ್ಯದ ಸಮಯದಲ್ಲಿ 1.86 ಕೋಟಿಯಾಗಿತ್ತು' ಎಂದು ಅದು ಸೇರಿಸಿದೆ.

IPL 2023 ಅನ್ನು ಭಾರತದ ಎಲ್ಲಾ ವೀಕ್ಷಕರಿಗೆ ಉಚಿತ ಸ್ಟ್ರೀಮಿಂಗ್ ನೀಡಿರುವುದೇ JioCinema ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ಕಾಣಲು ಕಾರಣವಾಗಿದೆ. 

ಪ್ರತಿ ದಿನ ಲಕ್ಷಾಂತರ ಜನ ಜಿಯೋಸಿನಿಮಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ದಿನವೂ ಲಕ್ಷಾಂತರ ಹೊಸ ವೀಕ್ಷಕರು ಸೇರ್ಪಡೆಯಾಗುತ್ತಿದ್ದಾರೆ. ಸದ್ಯ ಜಿಯೋಸಿನಿಮಾ ಎಲ್ಲರಿಗೂ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ. ಆದರೆ, ಐಪಿಎಲ್ ಮುಕ್ತಾಯದ ನಂತರ ಜಿಯೋ ಸಿನಿಮಾ ವೀಕ್ಷಿಸಲು ದುಡ್ಡು ನೀಡಬೇಕಾಗುತ್ತದೆ.

SCROLL FOR NEXT