ಬೆಂಗಳೂರು: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ರನ್ ಗಳ ರೋಚಕ ಜಯ ದಾಖಲಿಸಿದೆ.
ಆರ್ ಸಿಬಿ ನೀಡಿದ 190 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ ತಂಡ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 7 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.
ಇದನ್ನೂ ಓದಿ: IPL 2023: ಡುಪ್ಲೆಸಿಸ್, ಮ್ಯಾಕ್ಸ್ ವೆಲ್ ಸ್ಫೋಟಕ ಬ್ಯಾಟಿಂಗ್; ರಾಜಸ್ತಾನಕ್ಕೆ 190 ರನ್ ಗುರಿ ನೀಡಿದ ಆರ್ ಸಿಬಿ
190 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ರಾಜಸ್ಥಾನ ತಂಡಕ್ಕೆ ಯಶಸ್ವಿ ಜೈಸ್ವಾಲ್ (47) ಮತ್ತು ದೇವತ್ತ ಪಡಿಕ್ಕಲ್ (52) ಭದ್ರ ಬುನಾದಿ ಹಾಕಿಕೊಟ್ಟರು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಲಿಲ್ಲ. ಧ್ರುವ್ ಜುರೆಲ್ (34) ಕೊನೆಯಲ್ಲಿ ಪ್ರತಿರೋಧ ತೋರಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದೊಂದಿಗೆ 182ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆರ್‌ಸಿಬಿ ಪರ ಹರ್ಷಲ್ ಪಟೇಲ್ ಮೂರು ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಗಿಟ್ಟಿಸಿಕೊಂಡ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ಅವರು ಮೊದಲ ಎಸೆತಕ್ಕೇ ಔಟಾದರೂ, ಫಾಫ್ ಡುಪ್ಲೆಸಿಸ್ 62 (39 ಎಸೆತ), ಗ್ಲೆನ್ ಮ್ಯಾಕ್ಸ್‌ವೆಲ್ ಅವರ 77 (44) ರನ್‌ಗಳ ಕೊಡುಗೆಯಿಂದ ಆರ್‌ಸಿಬಿ ಸವಾಲಿನ ಮೊತ್ತ ಗಳಿಸುವಲ್ಲಿ ಯಶಸ್ವಿಯಾಯಿತು.