ಕ್ರಿಕೆಟ್

ಐಪಿಎಲ್ 2023: RCB ಹಂಗಾಮಿ ನಾಯಕ ವಿರಾಟ್ ಕೊಹ್ಲಿಗೆ 24 ಲಕ್ಷ ರೂ ದಂಡ, ಬ್ಯಾನ್ ಭೀತಿಯಲ್ಲಿ ಬೆಂಗಳೂರು ನಾಯಕ?

Srinivasamurthy VN

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿಗೆ 24 ಲಕ್ಷ ರೂ ದಂಡ ವಿಧಿಸಲಾಗಿದೆ.

ಹೌದು.. ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಗೆಲುವಿನ ಖುಷಿಯ ತೇಲುತ್ತಿದ್ದ ಆರ್​ಸಿಬಿ ತಂಡಕ್ಕೆ ಬಿಸಿಸಿಐ ಶಾಕ್ ನೀಡಿದ್ದು, ಆರ್​ಆರ್ ವಿರುದ್ಧದ ಪಂದ್ಯದಲ್ಲಿ ಸ್ಲೋ ಓವರ್ ರೇಟ್​ಗಾಗಿ ಆರ್​ಸಿಬಿ ತಂಡಕ್ಕೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ನಿಧಾನಗತಿಯ ಓವರ್​ ರೇಟ್​ಗಾಗಿ ಆರ್​ಸಿಬಿ ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿಗೆ 24 ಲಕ್ಷ ರೂ. ದಂಡ ವಿಧಿಸಿದರೆ, ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿದ್ದ ಉಳಿದ ಆಟಗಾರರಿಗೆ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ 25 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ.

ತಪ್ಪು ಪುನರಾವರ್ತನೆ: ಬ್ಯಾನ್ ಭೀತಿಯಲ್ಲಿ RCB ನಾಯಕ?
ಆರ್​ಸಿಬಿ ತಂಡದ ನಾಯಕ 2ನೇ ಬಾರಿ ಬಾರಿ ನಿಧಾನಗತಿಯಲ್ಲಿ ಓವರ್ ಮುಗಿಸಿದ್ದು, ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ದಂಡ ವಿಧಿಸಲಾಗಿದೆ. ಏತನ್ಮಧ್ಯೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಓವರ್​ಗಳನ್ನು ಮುಗಿಸಿದ್ದ ಪರಿಣಾಮ​ ಫಾಫ್‌ ಡುಪ್ಲೆಸಿಸ್​ಗೆ 12 ಲಕ್ಷ ದಂಡ ವಿಧಿಸಲಾಗಿತ್ತು. ಇದೀಗ ಆರ್​ಸಿಬಿ 2ನೇ ಬಾರಿ ತಪ್ಪನ್ನು ಪುನರಾವರ್ತಿಸಿದೆ. ಒಂದು ವೇಳೆ ಆರ್​ಸಿಬಿ ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಮುಂದಿನ ಪಂದ್ಯದಲ್ಲೂ ಇದೇ ತಪ್ಪನ್ನು ಮಾಡಿದರೆ, ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಲಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ನಿಗದಿತ ಸಮಯದಲ್ಲಿ 20 ಓವರ್​ಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

ಐಸಿಸಿ ನಿಯಮದ ಪ್ರಕಾರ ಟಿ20 ಕ್ರಿಕೆಟ್​ನಲ್ಲಿ 20 ಓವರ್​ಗಳನ್ನು 1 ಗಂಟೆ 25 ನಿಮಿಷದೊಳಗೆ ಪೂರ್ಣಗೊಳಿಸಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಉಳಿದ ಓವರ್​ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್​ನಿಂದ ಒಬ್ಬ ​ಆಟಗಾರನನ್ನು 30 ಯಾರ್ಡ್​ ಸರ್ಕಲ್​ನಲ್ಲಿ ನಿಲ್ಲಿಸಬೇಕಾಗುತ್ತದೆ. 

ಸ್ಲೋ ಓವರ್​ ರೇಟ್​ ನಿಯಮ:

ಸ್ಲೋ ಓವರ್​ ರೇಟ್​ ನಿಯಮದ ಅಡಿಯಲ್ಲಿ ಮೊದಲ ತಪ್ಪಿಗೆ ನಾಯಕನನ್ನು ದೋಷಿಯನ್ನಾಗಿಸಲಾಗುತ್ತದೆ. ಅದರಂತೆ ಮೊದಲ ಬಾರಿಯ ತಪ್ಪಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದು ಪುನರಾವರ್ತನೆಯಾದರೆ 24 ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಅಲ್ಲದೆ ತಂಡದ ಇತರೆ ಆಟಗಾರರು ಪಂದ್ಯ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡವಾಗಿ ಪಾವತಿಸಬೇಕು.
 

SCROLL FOR NEXT