ಕ್ರಿಕೆಟ್

ದಾದಾ ಗೆ ಪಾಠ ಕಲಿಸಲು ಬಯಸಿದ್ದ ಕೊಹ್ಲಿ!: ಸ್ಟಿಂಗ್ ಆಪರೇಶನ್ ನಲ್ಲಿ ಅಚ್ಚರಿಯ ಅಂಶಗಳು ಬಹಿರಂಗ!

Srinivas Rao BV

ನವದೆಹಲಿ: ಕೊಹ್ಲಿ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಬಿಸಿಸಿಐ ನ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದು ವಿವಾದಕ್ಕೆ ಗುರಿಯಾಗಿದ್ದಾರೆ.

ಮಂಗಳವಾರದಂದು ಪ್ರಸಾರವಾದ ಸ್ಟಿಂಗ್ ಆಪರೇಷನ್ ವೊಂದರಲ್ಲಿ ಚೇತನ್ ಶರ್ಮಾ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ತೆರೆ ಮರೆ ನಡೆಯುವ ಮಾತುಕತೆ ಹಾಗೂ ಕೊಹ್ಲಿ-ಸೌರವ್ ಗಂಗೂಲಿ ನಡುವಿನ ಕೆಲವು ಬೆಚ್ಚಿಬೀಳಿಸುವ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

ಕೊಹ್ಲಿ- ಸೌರವ್ ಗಂಗೂಲಿ ನಡುವಿನ ಸಂಬಂಧ ಹಾಳಾಗುವುದಕ್ಕೆ  ಅಹಂ ಸಮಸ್ಯೆಗಳೂ ಕಾರಣ ಎಂದು ಶರ್ಮಾ ಹೇಳಿದ್ದಾರೆ.

"ಕೊಹ್ಲಿ ಒಂದು ಹಂತದಲ್ಲಿ ಮಂಡಳಿಗಿಂತಲೂ ತಾವೇ ದೊಡ್ಡವರೆಂದು ಭಾವಿಸತೊಡಗಿದರು ಹಾಗೂ ಗಂಗೂಲಿಯೇ ತಮ್ಮನ್ನು ಒಡಿಐ ನಾಯಕತ್ವದಿಂದ ತೆಗೆದುಹಾಕಿದ್ದು ಎಂದು ಭಾವಿಸಿ, ಗಂಗೂಲಿಗೆ ಪಾಠ ಕಲಿಸಲು (ಪ್ರತೀಕಾರ) ಯತ್ನಿಸಿದ್ದರು" ಎಂದು ಶರ್ಮಾ ಹೇಳಿದ್ದಾರೆ. 

ಆಟಗಾರ ಜನಪ್ರಿಯತೆ ಗಳಿಸುತ್ತಿದ್ದಂತೆಯೇ ಆತ ಮಂಡಳಿಗಿಂತಲೂ ತಾನೇ ದೊಡ್ಡವ ಎಂದು ಭಾವಿಸಲು ಪ್ರಾರಂಭಿಸುತ್ತಾರೆ ಹಾಗೂ ಯಾರೂ ತಮಗೆ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದುಕೊಳ್ಳುತ್ತಾರೆ. ತಾವಿಲ್ಲದೇ ದೇಶದಲ್ಲಿ ಕ್ರಿಕೆಟ್ ನಿಂತೇ ಹೋಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಅಂಥಹದ್ದು ಸಾಧ್ಯವಾಗಿದೆಯೇ? ಕ್ರಿಕೆಟ್ ನ ತಾರೆಗಳು ಬಂದುಹೋಗಿದ್ದಾರೆ. ಆದರೆ ಕ್ರಿಕೆಟ್ ಹಾಗೆಯೇ ಇದೆ. ಆ ಸಮಯದಲ್ಲಿ ಗಂಗೂಲಿಗೆ ಕೊಹ್ಲಿ ಪಾಠ ಕಲಿಸಬೇಕು ಎಂದುಕೊಂಡಿದ್ದರು ಎಂದು ಶರ್ಮಾ ಹೇಳಿರುವುದು ಈಗ ವಿವಾದಕ್ಕೆ ಗುರಿಯಾಗಿದೆ. 

ಇದು ಬಿಸಿಸಿಐ ವಿರುದ್ಧ ಆಟಗಾರನೋರ್ವ ಹೋಗುವ ಉದಾಹರಣೆಯಾಗಿದೆ. ಅಧ್ಯಕ್ಷರು ಬಿಸಿಸಿಐ ನ್ನು ಪ್ರತಿನಿಧಿಸುತ್ತಾರೆ ಅಲ್ಲವೇ? ಅದು ಯಾರ ತಪ್ಪು ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ಆದರೆ ಈ ಘಟನೆಗಳು ನಡೆದಾಗ ಅದು ಬಿಸಿಸಿಐ ಮೇಲಿನ ದಾಳಿಯೇ ಆಗಿತ್ತು. ನಮ್ಮ ಎಲ್ಲಾ ಆಟಗಾರರು ಇದನ್ನು ಮಾಡುವುದರಿಂದ ನಿರುತ್ಸಾಹಗೊಳ್ಳುತ್ತಾರೆ. ಏಕೆಂದರೆ ತಪ್ಪು ಅಧ್ಯಕ್ಷರದ್ದೇ ಆದರೂ ಪ್ರತಿಯೊಬ್ಬರೂ ಆಟಗಾರರ ವಿರುದ್ಧವೇ ಹೋಗುವುದರಿಂದ ಆಟಗಾರರಿಗೆ ನಷ್ಟವಾಗುತ್ತದೆ. ಅಧ್ಯಕ್ಷ ಸ್ಥಾನಕ್ಕೆ ಗೌರವ ಇರಬೇಕು ಎಂದು ಸ್ಟಿಂಗ್ ಆಪರೇಷನ್ ವೇಳೆ ಶರ್ಮಾ ಹೇಳಿದ್ದಾರೆ.

2022 ರಲ್ಲಿ ಜನವರಿಯಲ್ಲಿ ದಕ್ಷಿಣ ಆಫ್ರಿಕಾದ ಪ್ರವಾಸದ ವೇಳೆ ಕೊಹ್ಲಿ ತಮ್ಮನ್ನು ಒಡಿಐ ನಾಯಕತ್ವದಿಂದ ತೆಗೆದ ವಿಷಯವನ್ನು ಪ್ರಸ್ತಾಪಿಸಿದ್ದರು, ಏಕೆಂದರೆ ಅವರಿಗೆ ಗಂಗೂಲಿ ತಮ್ಮನ್ನು 50 ಓವರ್ ಫಾರ್ಮ್ಯಾಟ್ ನ ನಾಯಕತ್ವದಿಂದ ತೆಗೆದುಹಾಕುವಲ್ಲಿ ಮಹತ್ವದ ಪಾತ್ರ ಹೊಂದಿದ್ದರು ಎಂದು ಕೊಹ್ಲಿ ಭಾವಿಸಿದ್ದರು. ಗಂಗೂಲಿಗೆ ಅವಮಾನ ಮಾಡಬೇಕೆಂದು ಕೊಹ್ಲಿ ತಮಗೆ ಯಾವುದೇ ಮಾಹಿತಿಯೇ ಇಲ್ಲದೇ ಒಡಿಐ ನಾಯಕತ್ವದಿಂದ ತೆಗೆದುಹಾಕಲಾಯಿತು ಎಂದು ಪತ್ರಕರ್ತರ ಎದುರು ಸುಳ್ಳು ಹೇಳಿದ್ದರೆಂದು ಕೊಹ್ಲಿ ವಿರುದ್ಧ ಶರ್ಮಾ ಆರೋಪಿಸಿದ್ದಾರೆ.

SCROLL FOR NEXT