ಕ್ರಿಕೆಟ್

ಮೊದಲ ಏಕದಿನ ಪಂದ್ಯ: ಕೊಹ್ಲಿ ಶತಕ, ಭಾರತ ಭರ್ಜರಿ ಬ್ಯಾಟಿಂಗ್, ಲಂಕೆಗೆ 374 ರನ್ ಗಳ ಬೃಹತ್ ಗುರಿ

Srinivasamurthy VN

ಗುವಾಹತಿ: ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾಗೆ ಗೆಲ್ಲಲು 374 ರನ್ ಗಳ ಬೃಹತ್ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ವಿರಾಟ್ ಕೊಹ್ಲಿ ಶತಕ, ರೋಹಿತ್ ಶರ್ಮಾ (83), ಶುಭ್ ಮನ್ ಗಿಲ್ (70 ರನ್) ಅರ್ಧಶತಕದ ನೆರವಿನಿಂದ ನಿಗಧಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಕಲೆಹಾಕಿತು. ಆ ಮೂಲಕ ಶ್ರೀಲಂಕಾಗೆ ಗೆಲ್ಲಲು 374 ರನ್ ಗಳ ಬೃಹತ್ ಗುರಿ ನೀಡಿದೆ.

ಭಾರತ ಪರ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ಭರ್ಜರಿ ಶತಕದ ಜೊತೆಯಾಟವಾಡಿದರು. ಕೇವಲ 67 ಎಸೆತಗಳಲ್ಲಿ 83ರನ್ ಗಳಿಸಿದರೆ, ಶುಭ್ ಮನ್ ಗಿಲ್ 60 ಎಸೆತಗಳಲ್ಲಿ 70 ರನ್ ಗಳಿಸಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಗಳಿಸಿ ತಮ್ಮ ವೃತ್ತಿ ಜೀವನದ 45ನೇ ಏಕದಿನ ಶತಕ ಸಿಡಿಸಿದರು. ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಕೆಎಲ್ ರಾಹುಲ್ 29 ಎಸೆತಗಳಲ್ಲಿ 39ರನ್ ಗಳಿಸಿದರು. 

ಭಾರತ  ತಂಡ ದಿಢೀರ್ ಪತನ ಕಂಡಿತು. ಹಾರ್ದಿಕ್ ಪಾಂಡ್ಯಾ 14 ರನ್ ಗಳಿಸಿ ಔಟಾದರೆ, ಅಕ್ಸರ್ ಪಟೇಲ್ 9ರನ್ ಗಳಿಸಿ ಔಟಾದರು. ಆರಂಭದಲ್ಲಿ ವಿಕೆಟ್ ಪಡೆಯಲು ತಿಣುಕಾಡಿ ಶ್ರೀಲಂಕಾ ಬೌಲರ್ ಗಳು ಇನ್ನಿಂಗ್ಸ್ ಅಂತಿಮ ಹಂತದಲ್ಲಿ 3 ವಿಕೆಟ್ ಪಡೆದು ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಶ್ರೀಲಂಕಾ ಪರ ಕಸುನ್ ರಜಿತಾ 3 ವಿಕೆಟ್ ಪಡೆದರೆ, ಮಧುಶಂಕ, ಕರುಣರತ್ನೆ, ಶನಕ ಮತ್ತು ಡಿಸಿಲ್ವಾ ತಲಾ ಒಂದು ವಿಕೆಟ್ ಪಡೆದರು.
 

SCROLL FOR NEXT