ಕ್ರಿಕೆಟ್

ಮಹಿಳಾ ಅಥ್ಲೀಟ್ ಗಳಿಗೆ ನಿರ್ಬಂಧ ಪ್ರತಿಭಟಿಸಿ ಅಫ್ಘಾನ್ ಕ್ರಿಕೆಟ್ ಸರಣಿಯಿಂದ ಹೊರನಡೆದ ಆಸ್ಟ್ರೇಲಿಯಾ 

Srinivas Rao BV

ಸಿಡ್ನಿ: ತಾಲೀಬಾನ್ ಮಹಿಳೆಯರ ಹಕ್ಕುಗಳ ಮೇಲೆ ನಿರ್ಬಂಧ ಹೇರುವುದನ್ನು ಮುಂದುವರೆಸಿರುವುದನ್ನು ವಿರೋಧಿಸಿ ಯುನೈಟೆಡ್ ಅರಬ್ ಎಮಿರೈಟ್ಸ್ ನಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಸರಣಿಯಿಂದ ಆಸ್ಟ್ರೇಲಿಯಾ ಹೊರನಡೆದಿದೆ. 

ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಅಫ್ಘಾನಿಸ್ತಾನ ತಂಡದೊಂದಿಗೆ ಆಸ್ಟ್ರೇಲಿಯಾ ಮಾರ್ಚ್ ನಲ್ಲಿ ಸೆಣೆಸಬೇಕಿತ್ತು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಆಸ್ಟ್ರೇಲಿಯಾ ಸರ್ಕಾರವೂ ಸೇರಿದಂತೆ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದು ಅಫ್ಘಾನಿಸ್ಥಾನ - ಆಸ್ಟ್ರೇಲಿಯಾ ಟೂರ್ನಿ ನಡೆಯುವುದಿಲ್ಲ ಎಂದು ತಿಳಿಸಿದೆ. 

ತಾಲೀಬಾನ್ ಇತ್ತೀಚೆಗೆ ಮಹಿಳೆಯರು, ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ನಿರ್ಬಂಧಗಳನ್ನು ಹೆಚ್ಚಿಸಿದೆ.  ಪಾರ್ಕ್ ಹಾಗೂ ಜಿಮ್ ಗಳಲ್ಲಿ ಅವರಿಗೆ ಪ್ರವೇಶವನ್ನೂ ನಿರಾಕರಿಸಿದ್ದಾರೆ ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ- ಅಫ್ಘಾನಿಸ್ಥಾನ ಸರಣಿ ನಡೆಯುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
 
ಜಾಗತಿಕವಾಗಿ ಕ್ರೀಡೆಯಲ್ಲಿ ಮಹಿಳೆ ಹಾಗೂ ಪುರುಷರಿಗೆ ಸಮನಾಗಿ ಅವಕಾಶ ಸಿಗಬೇಕೆಂಬ ನಿಲುವಿಗೆ ಸಂಸ್ಥೆ ಬದ್ಧವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. 

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಪರಿಸ್ಥಿತಿ ಸುಧಾರಿಸಲಿದೆ ಎಂಬ ವಿಶ್ವಾಸವಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. 

SCROLL FOR NEXT