ಕ್ರಿಕೆಟ್

ಪ್ರಧಾನಿ ಮಾತಿಗೆ ಮಣಿದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನಿರ್ಧಾರ ಹಿಂಪಡೆದ ತಮೀಮ್ ಇಕ್ಬಾಲ್!

Vishwanath S

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಮಧ್ಯಸ್ಥಿಕೆಯ ನಂತರ ತಮೀಮ್ ಇಕ್ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿದ್ದಾರೆ. 

ಮೂರು ತಿಂಗಳ ನಂತರ ಭಾರತದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ತಮೀಮ್ ಇಕ್ಬಾಲ್ ಬಾಂಗ್ಲಾದೇಶದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಇದೇ ಕಾರಣಕ್ಕೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ತಮೀಮ್ ಇಕ್ಬಾಲ್ ಅವರೊಂದಿಗೆ ಮಾತನಾಡಿದ್ದು, ಅಂತಿಮವಾಗಿ ಅವರು ನಿವೃತ್ತಿಯಿಂದ ಹಿಂತಿರುಗಲು ನಿರ್ಧರಿಸಿದ್ದಾರೆ.

ತಮೀಮ್ ಇಕ್ಬಾಲ್‌ಗಿಂತ ಮುಂಚೆಯೇ ಅನೇಕ ಕ್ರಿಕೆಟಿಗರು ನಿವೃತ್ತಿಯ ನಿರ್ಧಾರದ ನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡು ತಂಡಕ್ಕಾಗಿ ಆಡುವುದನ್ನು ನೋಡಿದ್ದೇವೆ. ಶಾಹಿದ್ ಅಫ್ರಿದಿ, ಮೊಯಿನ್ ಅಲಿಯಂತಹ ದಿಗ್ಗಜ ಆಟಗಾರರೂ ಇದರಲ್ಲಿ ಭಾಗಿಯಾಗಿದ್ದಾರೆ.

ನಿವೃತ್ತಿಯ ಸಮಯದಲ್ಲಿ ಇಕ್ಬಾಲ್, 'ಇದು ನನ್ನ ವೃತ್ತಿಜೀವನದ ಅಂತ್ಯ.. ನಾನು ನನ್ನ ಅತ್ಯುತ್ತಮ ಆಟ ನೀಡಿದ್ದೇನೆ.. ನನ್ನ ಅತ್ಯುತ್ತಮ ನೀಡಲು ಪ್ರಯತ್ನಿಸಿದೆ. ನಾನು ಈ ಕ್ಷಣದಿಂದಲೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ ಎಂದು ಹೇಳಿದ್ದರು. "ನನ್ನ ಎಲ್ಲಾ ತಂಡದ ಸಹ ಆಟಗಾರರು, ತರಬೇತುದಾರರು, BCB (ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ) ಅಧಿಕಾರಿಗಳು, ನನ್ನ ಕುಟುಂಬ ಸದಸ್ಯರು ಮತ್ತು ಈ ಸುದೀರ್ಘ ಪ್ರಯಾಣದಲ್ಲಿ ನನ್ನೊಂದಿಗೆ ಇದ್ದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದರು.

ತಮ್ಮ 16 ವರ್ಷಗಳ ಕ್ರಿಕೆಟ್ ಜೀವನದಲ್ಲಿ, ಇಕ್ಬಾಲ್ 70 ಟೆಸ್ಟ್‌ಗಳಲ್ಲಿ 10 ಶತಕ ಮತ್ತು ಒಂದು ದ್ವಿಶತಕ ಸೇರಿದಂತೆ 5,134 ರನ್ ಗಳಿಸಿದ್ದಾರೆ.

SCROLL FOR NEXT