ಕ್ರಿಕೆಟ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಾಯಿ ನಿಧನ: ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸಿದ ಆಸಿಸ್ ಆಟಗಾರರು!

Srinivasamurthy VN

ಆಹ್ಮದಾಬಾದ್: ಅನಾರೋಗ್ಯಕ್ಕೆ ತುತ್ತಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಾಯಿ ಮಾರಿಯಾ ಅವರು ನಿಧನರಾಗಿದ್ದು, ಅವರ ಗೌರವಾರ್ಥ ಇಂದು ಆಸ್ಟ್ರೇಲಿಯಾ ಆಟಗಾರರು ಮೈದಾನಕ್ಕೆ ಕಪ್ಪು ಪಟ್ಟಿ ಧರಿಸಿ ಇಳಿದಿದ್ದರು.

ಹೌದು. ಆಸ್ಚ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಅವರ ತಾಯಿ ಮೃತಪಟ್ಟಿದ್ದಾರೆ. ಅವರಿಗೆ ಗೌರವ ಸೂಚಿಸುವ ಸಲುವಾಗಿ ನಮ್ಮ ಆಟಗಾರರು, ಭಾರತ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಣಕ್ಕಿಳಿದಿದ್ದಾರೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಶುಕ್ರವಾರ ತಿಳಿಸಿದೆ.

ಕಮಿನ್ಸ್‌ ತಾಯಿಯ ನಿಧನದ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕ್ರಿಕೆಟ್‌ ಆಸ್ಟ್ರೇಲಿಯಾ, 'ಮರಿಯಾ ಕಮಿನ್ಸ್‌ ಅವರು ತಡರಾತಿ ಮೃತಪಟ್ಟಿದ್ದು, ನಾವೆಲ್ಲ ತೀವ್ರ ದುಃಖದಲ್ಲಿದ್ದೇವೆ. ಆಸ್ಟ್ರೇಲಿಯಾ ಕ್ರಿಕೆಟ್‌ ಪರವಾಗಿ ನಾವು ಪ್ಯಾಟ್‌ ಕಮಿನ್ಸ್‌ ಅವರ ಕುಟುಂಬ ಹಾಗೂ ಸ್ನೇಹಿತರಿಗಾಗಿ ಹೃತ್ಪೂರ್ವಕ ಸಂತಾಪ ಸೂಚಿಸುತ್ತೇವೆ. ಆಸ್ಟ್ರೇಲಿಯಾ ‍ಪುರುಷರ ತಂಡ ಮರಿಯಾ ಅವರ ಗೌರವಾರ್ಥವಾಗಿ ಇಂದು ಕಪ್ಪು ಪಟ್ಟಿ ಧರಿಸಿ ಆಡಲಿದೆ' ಎಂದು ತಿಳಿಸಿತ್ತು.

ಕಮಿನ್ಸ್‌ ಅವರು ತಮ್ಮ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್ ಪಂದ್ಯದ ಬಳಿಕ ಆಸ್ಟ್ರೇಲಿಯಾಗೆ ವಾಪಸ್‌ ಆಗಿದ್ದರು. ಹೀಗಾಗಿ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ತಂಡದ ಹೊಣೆ ಹೊತ್ತಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ, ನಾಲ್ಕು ಪಂದ್ಯಗಳ 'ಬಾರ್ಡರ್‌–ಗಾವಸ್ಕರ್‌ ಟೆಸ್ಟ್‌ ಕ್ರಿಕೆಟ್‌ ಸರಣಿ'ಯಲ್ಲಿ ಮುಖಾಮುಖಿಯಾಗಿವೆ. ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾಗೆ, ಕಾಂಗರೂ ಪಡೆ ಮೂರನೇ ಪಂದ್ಯದಲ್ಲಿ ತಿರುಗೇಟು ನೀಡಿತ್ತು. ಅಂತಿಮ ಪಂದ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿದೆ.
 

SCROLL FOR NEXT