ಕ್ರಿಕೆಟ್

ಐಪಿಎಲ್ 2023: ಲಕ್ನೋ-ಸಿಎಸ್ ಕೆ ಪಂದ್ಯ ಮಳೆಗಾಹುತಿ, ಉಭಯ ತಂಡಗಳಿಗೆ ಅಂಕ ಹಂಚಿಕೆ

Srinivasamurthy VN

ಲಖನೌ: ಹಾಲಿ ಐಪಿಎಲ್ ಟೂರ್ನಿಯ ಲಕ್ನೋ-ಸಿಎಸ್ ಕೆ ಇಂದಿನ ಮೊದಲ ಪಂದ್ಯ ಮಳೆಗಾಹುತಿಯಾಗಿದ್ದು, ಉಭಯ ತಂಡಗಳಿಗೆ ಅಂಕ ಹಂಚಿಕೆ ಮಾಡಲಾಗಿದೆ.

ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದಿದ್ದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಮಳೆಗಾಹುತಿಯಾಗಿದೆ. ಪಂದ್ಯ ರದ್ದಾದ ಹಿನ್ನಲೆಯಲ್ಲಿ ಅಂಪೈರ್ ಗಳು ಉಭಯ ತಂಡಗಳಿಗೆ ಅಂಕ ಹಂಚಿಕೆ ಮಾಡಿದ್ದಾರೆ. ಅದರಂತೆ ಲಕ್ನೋಗೆ 1 ಮತ್ತು ಚೆನ್ನೈ ತಂಡಕ್ಕೆ 1 ಅಂಕಗಳನ್ನು ನೀಡಲಾಗಿದೆ. 

ಇದಕ್ಕೂ ಮೊದಲು ಅಂದರೆ ಮಳೆಗೆ ಪಂದ್ಯ ಆಹುತಿಯಾಗುವ ಮೊದಲು ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಕೃಣಾಲ್ ಪಾಂಡ್ಯ ಎಲ್ ಎಸ್ ಜಿ ತಂಡ ಮುನ್ನಡೆಸಿದ್ದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 125 ರನ್ ಗಳಿಸಿ ಹಿನ್ನಡೆ ಅನುಭವಿಸಿತ್ತು. ಈ ಹಂತದಲ್ಲಿ ಆರಂಭವಾದ ಮಳೆ ಪಂದ್ಯಕ್ಕೆ ಅಡ್ಡಿ ಪಡಿಸಿತು. 

ಆರಂಭದಿಂದಲೂ ಚೆನ್ನೈನ ಮಾರಕ ಬೌಲಿಂಗ್ ಗೆ ತತ್ತರಿಸಿದ ಲಕ್ನೋ 103 ರನ್ ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಆಯುಷ್ ಬಡೋನಿ 33 ಎಸೆತದಲ್ಲಿ 59 ರನ್ ಗಳಿಸಿ ಲಕ್ನೋ ಮೊತ್ತ ನೂರರ ಗಡಿ ದಾಟುವಂತೆ ನೋಡಿಕೊಂಡರು. ಅವರಿಗೆ ನಿಕೋಲಸ್ ಪೂರನ್ ಉತ್ತಮ ಸಾಥ್ ನೀಡಿದರಾದರೂ ಅವರೂ ಬೇಗನೇ ವಿಕೆಟ್ ಒಪ್ಪಿಸಿದರು. ಮಳೆ ಬರುವ ಹೊತ್ತಿಗೆ ಲಕ್ನೋ ತಂಡ 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 125 ರನ್ ಗಳಿಸಿತ್ತು.

ಸಿಎಸ್ ಕೆ ಪರ ಮೊಯೀನ್ ಅಲಿ ಮತ್ತು  ಮಹೇಶ್ ತೀಕ್ಷಣ ತಲಾ 2 ವಿಕೆಟ್ ಪಡೆದರೆ, ಜಡೇಜಾ ಒಂದು ವಿಕೆಟ್ ಪಡೆದರು.
 

SCROLL FOR NEXT