ಕ್ರಿಕೆಟ್

IPL–2023: ಸತತ ಮಳೆ; ಫೈನಲ್‌ ಪಂದ್ಯ ನಾಳೆಗೆ ಮುಂದೂಡಿಕೆ

Srinivasamurthy VN

ಅಹ್ಮದಾಬಾದ್‌: 2023ರ ಐಪಿಎಲ್‌ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಮಳೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಫೈನಲ್ ಪಂದ್ಯವನ್ನು ನಾಳೆಗೆ (ಸೋಮವಾರಕ್ಕೆ) ಮುಂದೂಡಲಾಗಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ, ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ಹಾಗೂ ನಾಲ್ಕು ಬಾರಿ ಕಪ್‌ ಜಯಿಸಿರುವ ಚೆನ್ನೈ ಸೂಪರ್‌ಕಿಂಗ್ಸ್‌ ಮುಖಾಮುಖಿಯಾಗಿವೆ. ನಿರಂತರವಾಗಿ ಮಳೆ ಸುರಿದ ಕಾರಣ ಪಂದ್ಯವನ್ನು ನಾಳೆಗೆ ಮುಂದೂಡಲಾಗಿದೆ. 

ಟಾಸ್‌ ಗೂ ಅರ್ಧ ಗಂಟೆ ಮೊದಲು ಆರಂಭಗೊಂಡ ಮಳೆ 9.15ರ ಹೊತ್ತಿಗೆ ಬಿಡುವು ಕೊಟ್ಟಿತು. ಅಂಗಳಕ್ಕೆ ಹಾಕಿದ್ದ ಹೊದಿಕೆಗಳನ್ನೆಲ್ಲ ತೆಗೆಯಲಾಯಿತು. ಆದರೆ ಅಷ್ಟರಲ್ಲಿ ಪುನಃ ಮಳೆ ಜೋರಾಗಿಯೇ ಸುರಿಯತೊಡಗಿತು. ಪೂರ್ತಿ 20 ಓವರ್‌ಗಳ ಪಂದ್ಯಕ್ಕೆ ರಾತ್ರಿ 9.35ರ “ಡೆಡ್‌ ಲೈನ್‌’ ವಿಧಿಸಲಾಗಿತ್ತು. 9.45ಕ್ಕೆ ಆರಂಭಗೊಂಡರೆ 19 ಓವರ್‌ ಪಂದ್ಯ, 10 ಗಂಟೆಗೆ ಪ್ರಾರಂಭವಾದರೆ 17 ಓವರ್‌ ಪಂದ್ಯ, 10.15ಕ್ಕೆ ಮೊದಲ್ಗೊಂಡರೆ 15 ಓವರ್‌ಗಳ ಆಟವೆಂದು ತೀರ್ಮಾನಿಸಲಾಗಿತ್ತು. ತಲಾ 5 ಓವರ್‌ಗಳ ಪಂದ್ಯವಾದರೆ 12.06ರ ಅಂತಿಮ ಸಮಯವನ್ನು ನಿಗದಿಗೊಳಿಸಲಾಗಿತ್ತು. ಅಂತಿಮವಾಗಿ ಪಂದ್ಯವನ್ನು ನಾಳೆಗೆ ಮುಂದೂಡಲಾಗಿದೆ.

ನಾಳೆಯೂ ಮಳೆ ಬಂದರೆ ಗುಜರಾತ್ ಚಾಂಪಿಯನ್?
ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವೆ ರವಿವಾರ ಇಲ್ಲಿನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ನಡೆಯಬೇಕಿದ್ದ ಪ್ರಶಸ್ತಿ ಸಮರ ರಾತ್ರಿ 11 ಗಂಟೆಯ ತನಕ ಆರಂಭವಾಗಿಲ್ಲ. ಟಾಸ್‌ ಕೂಡ ಹಾಕಲು ಸಾಧ್ಯವಾಗಲಿಲ್ಲ. ಆದರೆ ಹವಾಮಾನ ವರದಿಯಂತೆ ಸೋಮವಾರವೂ ಮಳೆಯ ಭೀತಿ ಇದೆ. ಒಂದು ವೇಳೆ ಮೀಸಲು ದಿನದಂದೂ ಪಂದ್ಯ ನಡೆಯದೇ ಹೋದರೆ ಆಗ ಲೀಗ್‌ ಹಂತದ ಅಗ್ರಸ್ಥಾನಿಯಾಗಿದ್ದ ಗುಜರಾತ್‌ ಟೈಟಾನ್ಸ್‌ ಚಾಂಪಿಯನ್‌ ಎನಿಸಲಿದೆ.

SCROLL FOR NEXT