ಕ್ರಿಕೆಟ್

ಕ್ರೀಸ್ ಗೆ ತಡವಾಗಿ ಬಂದಿದ್ದಕ್ಕೆ ಔಟ್ ಕೊಟ್ಟ ಅಂಪೈರ್! ಕ್ರಿಕೆಟ್‌ನಲ್ಲಿ ಏನಿದು ಟೈಮ್ ಔಟ್ ರೂಲ್?

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 38ನೇ ಪಂದ್ಯ ಅಚ್ಚರಿಯ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯಿತು. ಬಾಂಗ್ಲಾದೇಶ  ನಡುವಿನ ಹಣಾಹಣಿಯಲ್ಲಿ  ಶ್ರೀಲಂಕಾದ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಬೌಲ್ಡ್, ಕ್ಯಾಚ್, ರನೌಟ್ ಆಗದೆ ಔಟ್ ಆದರು.

ಹೌದು. ಅವರು ಸರಿಯಾದ ಸಮಯಕ್ಕೆ ಕ್ರೀಸ್ ಗೆ ಬರದೆ ಔಟ್ ಆದರು. ಟೈಮ್ ಔಟ್ ನಿಯಮಗಳ ಲಾಭ ಪಡೆದುಕೊಂಡ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಅವರು ಶ್ರೀಲಂಕಾ ಆಟಗಾರ ಏಂಜಲೋ ಮ್ಯಾಥ್ಯೂಸ್ ಅವರನ್ನು ಔಟ್ ಮಾಡಿದರು.  

ಏನಿದು ಟೈಮ್  ಔಟ್ ರೂಲ್?
ಕ್ರಿಕೆಟ್ ನಲ್ಲಿ ಟೈಮ್ ಔಟ್ ಎಂಬ ನಿಯಮವಿದೆ. ಸಮಯಕ್ಕೆ ಸರಿಯಾಗಿ ಆಟ ಸುಗುಮವಾಗಿ ಸಾಗುವ ಸಲುವಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಒಂದು ವೇಳೆ ಆಟಗಾರ ಅನಾವಶ್ಯಕವಾಗಿ ವಿಳಂಬ ಮಾಡಿದರೆ ಅಥವಾ ಶಿಸ್ತು ಕಾಯ್ದುಕೊಳ್ಳಲಿದಿದ್ದರೆ ಅವರ ವಿರುದ್ಧ ಈ ನಿಯಮದ ಅನುಸಾರ ಕ್ರಮ ಕೈಗೊಳ್ಳಲಾಗುತ್ತದೆ.

ಇದರ ಪ್ರಕಾರ, ಯಾವುದೇ ಒಬ್ಬ ಬ್ಯಾಟ್ಸ್ ಮನ್ ಔಟ್ ಆದ 3 ನಿಮಿಷಗಳಲ್ಲಿ ( ವಿಶ್ವಕಪ್ ನಲ್ಲಿ 2 ನಿಮಿಷಗಳಲ್ಲಿ) ಮುಂದಿನ ಎಸೆತ ಎದುರಿಸಲು ಸಿದ್ದರಾಗಿರಬೇಕು. ಆದರೆ, ಮ್ಯಾಥ್ಯೂಸ್ ಮೈದಾನಕ್ಕೆ ಪ್ರವೇಶಿಸಿದಾಗ ಹೆಲ್ಮೆಟ್ ನಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದೇ ಕಾರಣದಿಂದ ಬದಲಾಯಿಸಿಕೊಂಡು ಬರಲೆಂದು ಡ್ರೆಸ್ಸಿಂಗ್ ರೂಮಿನ ಕಡೆಗೆ ಅವರು ತೆರಳಿದ್ದಾರೆ. ಇದೇ ಅವರು ಮಾಡಿದ್ದ ನಿಯಮ ಉಲ್ಲಂಘನೆ.

ಮ್ಯಾಥ್ಯೂಸ್ ಬದಲಿಗೆ ಮತ್ತೊಬ್ಬ ಆಟಗಾರನ್ನು ಕರೆದು ಆಡಿಸಬಹುದಾಗಿತ್ತು. ಆದರೆ, ಅದನ್ನು ಮಾಡದೆ ಸಮಯ ತೆಗೆದುಕೊಂಡಿದ್ದರಿಂದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸ್ ಮೇಲ್ಮನವಿ ಸಲ್ಲಿಸಿದ್ದಾರೆ. ಆಗ ನಿಯಮಗಳ ಪ್ರಕಾರ, ಮ್ಯಾಥ್ಯೂಸ್ ಔಟ್ ಎಂದು ತೀರ್ಪು ನೀಡಿದ್ದಾರೆ. ಇದರಿಂದಾಗಿ  ಮ್ಯಾಥ್ಯೂಸ್ ಒಂದೇ ಒಂದು ಎಸೆತವನ್ನು ಎದುರಿಸದೆ ಫೆವಿಲಿಯನ್ ಗೆ ನಿರ್ಗಮಿಸಬೇಕಾಯಿತು.

ಟೈಮ್ ಔಟ್  ರೂಲ್ ಏನು ಹೇಳುತ್ತದೆ?

ನಿಯಮ 40.1.1 ಪ್ರಕಾರ, ವಿಕೆಟ್ ಪತನದ ನಂತರ ಅಥವಾ ಬ್ಯಾಟರ್‌ ನಿರ್ಗಮನದ ನಂತರ, ಮೈದಾನದೊಳಗೆ ಬರುವ ಬ್ಯಾಟರ್, ಅಥವಾ ಇತರ ಬ್ಯಾಟರ್ ಮೂರು ನಿಮಿಷಗಳಲ್ಲಿ  ಚೆಂಡನ್ನು ಸ್ವೀಕರಿಸಲು ಸಿದ್ಧರಾಗಿರಬೇಕು. ಇಲ್ಲದಿದ್ದರೆ ಸಮಯ ಮೀರಿದೆ ಎಂದು ಟೈಮ್ ಔಟ್ ನಿಯಮ ಪ್ರಕಾರ ಔಟ್ ಆಗುತ್ತಾರೆ. 

ನಿಯಮ 40.1.2 ರ ಪ್ರಕಾರ, ಯಾವುದೇ ಬ್ಯಾಟರ್ ವಿಕೆಟ್‌ಗೆ ಬಾರದೆ  ವಿಳಂಬವಾದ ಸಂದರ್ಭದಲ್ಲಿ, ಅಂಪೈರ್‌ಗಳು ಕಾನೂನು 16.3 ರ ವಿಧಾನವನ್ನು ಅಳವಡಿಸಿಕೊಳ್ಳಬೇಕು (ಅಂಪೈರ್‌ಗಳು ಪಂದ್ಯವನ್ನು ನೀಡುವುದು). ಆ ಕಾನೂನಿನ ಉದ್ದೇಶಗಳಿಗಾಗಿ 3 ನಿಮಿಷಗಳ ಅವಧಿ ಮೀರದಂತೆ ನಿರ್ಧಾರ ತೆಗೆದುಕೊಳ್ಳಬೇಕು. ರನ್ ಔಟ್ ಮಾಡಿದಂತೆ ಬೌಲರ್ ಈ ಔಟಿನ ಕ್ರೆಡಿಟ್ ಪಡೆಯುವುದಿಲ್ಲ ಎಂಬುದನ್ನು ಸಹ ಗಮನಿಸಬೇಕು.

ಡಗೌಟ್‌ಗೆ ಮರಳಿದ ನಂತರ ಮ್ಯಾಥ್ಯೂಸ್‌ ಉಗಿದಿದ್ದರು. ನಾನ್-ಸ್ಟ್ರೈಕರ್ ರನ್-ಔಟ್‌ನಂತೆಯೇ  ಇದು ವಿವಾದಕ್ಕೂ ಕಾರಣವಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ, ಅಭಿಮಾನಿಗಳು ಮತ್ತು ಆಟದ ತಜ್ಞರು ನಾನಾ ರೀತಿಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

SCROLL FOR NEXT