ಕ್ರಿಕೆಟ್

2011, 2015, 2019 ಬಳಿಕ ಮತ್ತೆ ಕ್ರಿಕೆಟ್ ವಿಶ್ವಕಪ್ ಮೇಲೆ ಕಣ್ಣಿಟ್ಟ ಆಸ್ಟ್ರೇಲಿಯಾ; ಮರುಕಳಿಸುವುದೇ ಇತಿಹಾಸ?

Srinivasamurthy VN

ಅಹ್ಮದಾಬಾದ್: ಐಸಿಸಿ ವಿಶ್ವಕಪ್ ಟೂರ್ನಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿಗೆ ಅತಿಥೇಯ ತಂಡವೊಂದು ಫೈನಲ್ ಗೇರಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಹೌದು.. ಕ್ರಿಕೆಟ್ ವಿಶ್ವಕಪ್ ನ ಇತಿಹಾಸದಲ್ಲಿ 2011ರವರೆಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತಿಥೇಯ ದೇಶಗಳು ಎಂದೂ ಟ್ರೋಫಿ ಗೆದ್ದಿರಲಿಲ್ಲ. ಆದರೆ 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ಟೂರ್ನಿ ಈ ಇತಿಹಾಸವನ್ನು ಮುರಿದಿತ್ತು. ಅಂದು ವಿಶ್ವಕಪ್ ಗೆಲ್ಲುವ ಮೂಲಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಹೊಸ ಇತಿಹಾಸ ಸೃಷ್ಟಿ ಮಾಡಿತ್ತು. ಆ ಬಳಿಕ ನಡೆದ ಎರಡೂ ವಿಶ್ವಕಪ್‌ಗಳಲ್ಲಿ ತವರು ದೇಶಗಳೇ ವಿಶ್ವಕಪ್ ಗೆದ್ದಿವೆ. 2015ರಲ್ಲಿ ಆಸ್ಟ್ರೇಲಿಯಾ ಮತ್ತು 2019ರಲ್ಲಿ ಇಂಗ್ಲೆಂಡ್ ತಮ್ಮ ಆತಿಥ್ಯದಲ್ಲೇ ವಿಶ್ವಕಪ್ ಟ್ರೋಫಿ ಜಯಿಸಿವೆ. ಇದೀಗ ಮೂರನೇ ಬಾರಿಯೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಶ್ವಕಪ್ ಆತಿಥ್ಯ ವಹಿಸಿರುವ ಅತಿಥೇಯ ಭಾರತ ತಂಡ ಫೈನಲ್ ಗೇರಿದ್ದು, ಮತ್ತೆ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಇದರೊಂದಿಗೆ ಕಳೆದ ಮೂರು ಬಾರಿ (2011, 2015, 2019) ಅತಿಥೇಯ ದೇಶಗಳು ಟ್ರೋಫಿ ಗೆದ್ದ ಸಾಧನೆ ಮಾಡಿವೆ. ಈ ಪೈಕಿ 2011ರಲ್ಲಿ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಜಂಟಿಯಾಗಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದವು. ಆದರೆ ಫೈನಲ್‌ ಪಂದ್ಯವು ಮುಂಬೈನ ವಾಂಖೆಡೆ ಮೈದಾನದಲ್ಲಿ ಆಯೋಜನೆಗೊಂಡಿತ್ತಲ್ಲದೆ ಭಾರತ ಕಿರೀಟವನ್ನು ಎತ್ತಿ ಹಿಡಿದಿತ್ತು. ಅದೇ ರೀತಿ 2015ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸಿದ್ದ ವಿಶ್ವಕಪ್‌ನ ಫೈನಲ್ ಪಂದ್ಯವು ಮೆಲ್ಬರ್ನ್‌ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆದಿತ್ತು. ಇನ್ನು ಕಳೆದ ಬಾರಿ (2019) ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನ ಫೈನಲ್ ಪಂದ್ಯವು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದಿತ್ತು.

ಮೊದಲ ಮೂರು ವಿಶ್ವಕಪ್‌ಗಳಿಗೆ (1975, 1979, 1983) ಇಂಗ್ಲೆಂಡ್ ಆತಿಥ್ಯ ವಹಿಸಿತ್ತು. 1987ರಲ್ಲಿ ಭಾರತ ಹಾಗೂ ಪಾಕಿಸ್ತಾನದ ಆತಿಥ್ಯದಲ್ಲಿ ವಿಶ್ವಕಪ್ ನಡೆದಿತ್ತು. ಇನ್ನು 1992ರಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್, 1996ರಲ್ಲಿ ಭಾರತ-ಪಾಕಿಸ್ತಾನ-ಶ್ರೀಲಂಕಾದ ಆತಿಥ್ಯದಲ್ಲಿ ವಿಶ್ವಕಪ್ ನಡೆದಿತ್ತು. ಈ ಪೈಕಿ 1996ರಲ್ಲಿ ಶ್ರೀಲಂಕಾ ಟ್ರೋಫಿ ಗೆದ್ದರೂ ಫೈನಲ್ ಪಂದ್ಯ ಲಾಹೋರ್‌ನಲ್ಲಿ ನಡೆದಿತ್ತು ಎಂಬುದು ಗಮನಾರ್ಹವೆನಿಸುತ್ತದೆ. ಇನ್ನು 1999ರಲ್ಲಿ ಇಂಗ್ಲೆಂಡ್, 2003ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ 2007ರಲ್ಲಿ ವೆಸ್ಟ್‌ಇಂಡೀಸ್ ಆತಿಥ್ಯದಲ್ಲಿ ವಿಶ್ವಕಪ್ ಆಯೋಜನೆಗೊಂಡಿತ್ತು. ಈ ಬಾರಿಯ ವಿಶ್ವಕಪ್‌‌ಗೆ ಭಾರತ ಆತಿಥ್ಯ ವಹಿಸುತ್ತಿದೆ. ಎಲ್ಲ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಕನಸು ನನಸಾಗಲು ಇನ್ನೊಂದು ಗೆಲುವಿನ ಅವಶ್ಯಕತೆಯಿದೆ. 

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 
 

SCROLL FOR NEXT