ಕ್ರಿಕೆಟ್

ICC Cricket World Cup 2023: ಕ್ರಿಸ್ ಗೇಯ್ಲ್ ಸಿಕ್ಸರ್ ದಾಖಲೆ ಸೇರಿ ಹಲವು ದಾಖಲೆ ಮುರಿದ ನಾಯಕ ರೋ'ಹಿಟ್' ಶರ್ಮಾ

Srinivasamurthy VN

ಅಹ್ಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕ್ರಿಸ್ ಗೇಯ್ಲ್ ಸಿಕ್ಸರ್ ದಾಖಲೆ ಸೇರಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಇಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಉತ್ತಮ ಆರಂಭ ಒದಗಿಸಿದ ರೋಹಿತ್ ಶರ್ಮಾ 31 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್​ ನರೆವಿನಿಂದ 47 ರನ್​ಗಳಿಸಿ ಟ್ರಾವಿಸ್​ ಹೆಡ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಈ ಅಲ್ಪ ಸಮಯದ ಭರ್ಜರಿ ಬ್ಯಾಟಿಂಗ್ ಮೂಲಕವೇ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ದಾಖಲೆಯ ಜತೆಯಾಟ
ರೋಹಿತ್​ ಶರ್ಮ ಮತ್ತು ಶುಭಮನ್​ ಗಿಲ್​ ಅವರು ಈ ವಿಶ್ವಕಪ್​ ಟೂರ್ನಿಯಲ್ಲಿ ಜತೆಯಾಟದ ದಾಖಲೆಯೊಂದನ್ನು ಬರೆದಿದ್ದು, ಈ ಮೂಲಕ ಗಿಲ್​ ಕ್ರಿಸ್ಟ್​ ಮತ್ತು ಮಾರ್ಕ್​ ವಾ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. 1999ರ ವಿಶ್ವಕಪ್​ ಋತುವಿನಲ್ಲಿ ಗಿಲ್​ಕ್ರಿಸ್ಟ್​ ಮತ್ತು ಮಾರ್ಕ್​ ವಾ ಜೋಡಿ 1,518 ರನ್‌ಗಳನ್ನು ಬಾರಿಸಿದ್ದರು. 2023ರ ಋತುವಿನಲ್ಲಿ ಗಿಲ್ ಮತ್ತು ರೋಹಿತ್ 1523 ರನ್ ಬಾರಿಸಿದರು. ದಾಖಲೆ ಸಚಿನ್​ ಮತ್ತು ಗಂಗೂಲಿ ಹೆಸರಿನಲ್ಲಿದೆ. 1998ರ ವಿಶ್ವಕಪ್​ನಲ್ಲಿ ಸಚಿನ್​ ಮತ್ತು ಸೌರವ್​ ಗಂಗೂಲಿ ಅವರು ಆರಂಭಿಕರಾಗಿ 1,635 ರನ್‌ಗಳನ್ನು ಬಾರಿಸಿದ್ದರು. 

ಗೇಯ್ಲ್ ಸಿಕ್ಸರ್​ ದಾಖಲೆ ಧೂಳಿಪಟ
ಈ ಪಂದ್ಯದಲ್ಲಿ ಮೂರು ಸಿಕ್ಸರ್​ ಬಾರಿಸುವ ಮೂಲಕ ರೋಹಿತ್​ ಅವರು ಏಕದಿನ ಕ್ರಿಕೆಟ್​ನಲ್ಲಿ ತಂಡವೊಂದರ ವಿರುದ್ಧ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡರು. ಕ್ರಿಸ್​ ಗೇಲ್​ ಅವರು ಇಂಗ್ಲೆಂಡ್ ವಿರುದ್ಧ 85 ಸಿಕ್ಸರ್‌ಗಳನ್ನು ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ರೋಹಿತ್​ ಅವರು ಆಸ್ಟ್ರೇಲಿಯಾ ವಿರುದ್ಧ 86 ಸಿಕ್ಸರ್​ ಬಾರಿಸಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಈ ಬಾರಿಯ ವಿಶ್ವಕಪ್​ನಲ್ಲಿ ರೋಹಿತ್​ 11 ಪಂದ್ಯ ಆಡಿ 31 ಸಿಕ್ಸರ್​ ಬಾರಿಸಿದ ಸಾಧನೆ ಮಾಡಿದರು.

ನಾಯಕನಾಗಿ ದಾಖಲೆ
36 ವರ್ಷದ ರೋಹಿತ್​ ಶರ್ಮ ಅವರು ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ನಾಯಕರಾದರು. ಈ ವಿಶ್ವಕಪ್‌ನಲ್ಲಿ ಹಿಟ್‌ಮ್ಯಾನ್ 594 ರನ್ ಗಳಿಸಿದರು. ಇದಕ್ಕೂ ಮುನ್ನ ಈ ದಾಖಲೆ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಹೆಸರಿನಲ್ಲಿತ್ತು. ವಿಲಿಯಮ್ಸನ್​ 2019ರ ವಿಶ್ವಕಪ್‌ನಲ್ಲಿ 578 ರನ್ ಗಳಿಸಿದ್ದರು. ಟೂರ್ನಿಯುದ್ದಕ್ಕೂ ಆಕ್ರಮಣಕಾರಿ ಬ್ಯಾಟಿಂಗ್​ ಶೈಲಿಯಲ್ಲಿ ಆಡಿದ ರೋಹಿತ್​ ಶರ್ಮ ಅವರು ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು.

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 84 ಎಸೆತಗಳಲ್ಲಿ 131 ರನ್‌ ಬಾರಿಸಿ ವಿಶ್ವಕಪ್​ನಲ್ಲಿ ಅತ್ಯಧಿಕ 7 ಶತಕ ಬಾರಿಸಿದ ಸಾಧನೆ ಮಾಡಿದ್ದರು. ಪಾಕಿಸ್ತಾನ ವಿರುದ್ಧ 51, ಬಾಂಗ್ಲಾದೇಶ ವಿರುದ್ಧ 48, ನ್ಯೂಜಿಲ್ಯಾಂಡ್‌ ವಿರುದ್ಧ 46, ಇಂಗ್ಲೆಂಡ್‌ ವಿರುದ್ಧ 87, ದಕ್ಷಿಣ ಆಫ್ರಿಕಾ ವಿರುದ್ಧ 40, ನೆದರ್ಲೆಂಡ್ಸ್‌ ವಿರುದ್ಧ 61 ರನ್‌ ಗಳಿಸಿದರು. ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 47 ರನ್‌ ಗಳಿಸಿದ ರೋಹಿತ್‌ ಫೈನಲ್​ ಪಂದ್ಯದಲ್ಲಿಯೂ 47 ರನ್‌ಗಳಿದರು. ಒಟ್ಟಾರೆ ಅವರು ಆಡಿದ 11 ಪಂದ್ಯಗಳಲ್ಲಿ 597 ರನ್​ ಗಳಿಸಿದ್ದಾರೆ.
 

SCROLL FOR NEXT