ಕ್ರಿಕೆಟ್

ಡ್ರೆಸ್ಸಿಂಗ್ ರೂಮ್ ಗೆ ಪ್ರಧಾನಿ ಭೇಟಿ: ಮೋದಿ ನಡೆಯನ್ನು ಕೊಂಡಾಡಿದ ಟೀಂ ಇಂಡಿಯಾ ಮಾಜಿ ಕೋಚ್!

Ramyashree GN

ಮುಂಬೈ: ವಿಶ್ವಕಪ್ 2023ರ ಫೈನಲ್ ಸೋಲಿನ ನಂತರ ಪ್ರಧಾನಿ ನರೇಂದ್ರ ಮೋದಿ ಡ್ರೆಸ್ಸಿಂಗ್ ರೂಮಿಗೆ ಭೇಟಿ ನೀಡಿ, ಟೀಂ ಇಂಡಿಯಾದ ಆಟಗಾರರನ್ನು ಸಂತೈಸಿದ ಪರಿಗೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಮಾರುಹೋಗಿದ್ದಾರೆ. 

ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, 'ಡ್ರೆಸ್ಸಿಂಗ್ ರೂಮ್ ಹೇಗಿರುತ್ತದೆ ಎಂಬುದು ನನಗೆ ತಿಳಿದಿರುವ ಕಾರಣದಿಂದ ಇದು ಅತ್ಯಂತ ಮಹತ್ವದ ವಿಚಾರ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಕ್ರಿಕೆಟಿಗನಾಗಿ ಹಲವು ವರ್ಷಗಳಿಂದ, ಭಾರತದ ತರಬೇತುದಾರನಾಗಿ ಏಳು ವರ್ಷಗಳಿಗೂ ಹೆಚ್ಚು ಕಾಲ ಆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಅನುಭವವಿದೆ' ಎಂದರು.

'ಇದು ಕರುಳು ಹಿಂಡುವ ಭಾವನೆ ಮತ್ತು ನೀವು ಸೋಲಿನಿಂದಾಗಿ ಕಂಗೆಟ್ಟಿರುವಾಗ ಅದೊಂತರ ವಿಚಿತ್ರವಾದ ಭಾವನೆ ನಿಮ್ಮನ್ನು ಆವರಿಸಿರುತ್ತದೆ. ಇಂತಹ ಸಯಮದಲ್ಲಿ ಡ್ರೆಸ್ಸಿಂಗ್ ರೂಮ್‌ಗೆ ದೇಶದ ಪ್ರಧಾನಿಯಾದಂತವರು ಭೇಟಿ ನೀಡಿದಾಗ, ಅದು ದೊಡ್ಡ ವಿಚಾರವಾಗಿರುತ್ತದೆ. ಏಕೆಂದರೆ, ಅದು ಆಟಗಾರರ ಉತ್ಸಾಹವನ್ನು ಹೆಚ್ಚಿಸುತ್ತದೆ' ಎಂದಿದ್ದಾರೆ.

ಇದು ಸಾಮಾನ್ಯ ವಿಚಾರವಲ್ಲ. ಒಂದು ದೇಶದ ಪ್ರಧಾನಿಯಾಗಿರುವಾಗ ಡ್ರೆಸ್ಸಿಂಗ್ ರೂಮ್‌ಗೆ ಕಾಲಿಡುವುದು ವಿಶೇಷವಾದ ನಡವಳಿಕೆ. ಇಂತಹ ಸಮಯದಲ್ಲಿ ಆಟಗಾರರಿಗೆ ಏನು ಅನಿಸುತ್ತದೆ ಎಂಬುದು ತಂಡದ ಮಾಜಿ ಕೋಚ್ ಆಗಿದ್ದ ನನಗೆ ತಿಳಿದಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ್ದಕ್ಕೆ ಕೆಲ ದಿನಗಳ ಹಿಂದೆ ಮಾಜಿ ಕ್ರಿಕೆಟಿಗ ಮತ್ತು ಹಾಲಿ ಟಿಎಂಸಿ ಸಂಸದ ಕೀರ್ತಿ ಆಜಾದ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಕುರಿತು ಟ್ವೀಟ್ ಮಾಡಿದ್ದ ಕೀರ್ತಿ ಆಜಾದ್, "ಡ್ರೆಸ್ಸಿಂಗ್ ರೂಮ್ ಯಾವುದೇ ತಂಡದ ಪವಿತ್ರ ಸ್ಥಳವಾಗಿದೆ. ಐಸಿಸಿ ಈ ಕೊಠಡಿಗಳಿಗೆ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶಿಸಲು ಅನುಮತಿಸುವುದಿಲ್ಲ. ಹೀಗಾಗಿ ಪ್ರಧಾನಿ ಮೋದಿ ಅವರು ಖಾಸಗಿ ಸಂದರ್ಶಕರ ಭೇಟಿ ಪ್ರದೇಶದಲ್ಲಿ, ಡ್ರೆಸ್ಸಿಂಗ್ ರೂಮ್ ಹೊರಗೆ ತಂಡವನ್ನು ಭೇಟಿಯಾಗಬೇಕಿತ್ತು. ನಾನು ಇದನ್ನು ಒಬ್ಬ ಕ್ರೀಡಾಪಟುವಾಗಿ ಹೇಳುತ್ತೇನೆ. ರಾಜಕಾರಣಿಯಾಗಿ ಅಲ್ಲ ಎಂದಿದ್ದರು.

SCROLL FOR NEXT