ಕ್ರಿಕೆಟ್

ಭಾರತದ ಟಿ20 ಕೋಚ್ ಹುದ್ದೆ ನಿರಾಕರಿಸಿದ ಆಶಿಶ್ ನೆಹ್ರಾ, ದ್ರಾವಿಡ್ ಕೋಚ್ ಅವಧಿ ವಿಸ್ತರಣೆಗೆ BCCI ಪಟ್ಟು, ನಿರ್ಧಾರ ಬದಲಿಸ್ತಾರಾ 'ಜಾಮಿ'?

Srinivasamurthy VN

ಮುಂಬೈ: ಗುಜರಾತ್ ಟೈಟನ್ಸ್ ಕೋಚ್ ಹಾಗೂ ಭಾರತ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರು ಟಿ20 ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುವ ಪ್ರಸ್ತಾಪವನ್ನು ತಿರಸ್ಕರಿಸಿದ ಬೆನ್ನಲ್ಲೇ ಇದೀಗ ಮತ್ತೆ ಬಿಸಿಸಿಐ ಕೋಚ್ ಹುದ್ದೆ ಮುಂದುವರೆಸುವಂತೆ ಹಾಲಿ ಕೋಚ್ ರಾಹುಲ್ ದ್ರಾವಿಡ್ ಬೆನ್ನು ಬಿದ್ದಿದೆ.

ಹೌದು.. ಮುಂದಿನ ವರ್ಷದ ಜೂನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ವರೆಗೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಮುಂದುವರಿಯಬೇಕೆಂದು ಬಿಸಿಸಿಐ ಬಯಸುತ್ತಿದ್ದು, ಪ್ರಸ್ತುತ ದ್ರಾವಿಡ್ ಕ್ರಿಕೆಟ್ ನ ಎಲ್ಲಾ ಮೂರು ಬಗೆಯ ಸ್ವರೂಪಗಳಲ್ಲಿ ಭಾರತ ತಂಡದ ಕೋಚ್ ಆಗಿದ್ದರು. ಈ ಹಿಂದೆ ಮುಕ್ತಾಯವಾದ ಏಕದಿನ ವಿಶ್ವಕಪ್‌ನ ಕೊನೆಯಲ್ಲಿ ದ್ರಾವಿಡ್‌ನ ಕೋಚ್ ಒಪ್ಪಂದವು ಮುಕ್ತಾಯಗೊಂಡಿತ್ತು. ಆದರೆ BCCI ಈಗ ಮಾಜಿ ಟೆಸ್ಟ್ ನಂ.3 ಜಾಮಿಗೆ ಹೊಸ ಒಪ್ಪಂದವನ್ನು ನೀಡಲು ಸಿದ್ಧವಾಗಿದೆ. ಅದರಂತೆ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ವರೆಗೂ ಕೋಚ್ ರಾಹುಲ್ ದ್ರಾವಿಡ್ ರನ್ನೇ ಮುಂದುವರೆಸಲು ಬಿಸಿಸಿಐ ಯೋಜಿಸಿದೆ. ಮುಂದಿನ ವರ್ಷ ಜೂನ್‌ನಿಂದ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ.

ಈ ಹಿಂದೆ ನೆಹ್ರಾ ಅವರಿಂದ ತರಬೇತಿ ಪಡೆದಿದ್ದ ಗುಜರಾತ್ ಟೈಟಾನ್ಸ್ ಕಳೆದ ವರ್ಷ ಐಪಿಎಲ್ ಚಾಂಪಿಯನ್ ಆಗಿತ್ತು ಮತ್ತು 2023 ರ ಋತುವಿನಲ್ಲಿ ರನ್ನರ್ ಅಪ್ ಆಗಿತ್ತು. ಇತ್ತ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತ ನಂತರ ಬಿಸಿಸಿಐ ಕೋಚ್ ಹುದ್ದೆಗಾಗಿ ನೆಹ್ರಾ ಅವರನ್ನೂ ಸಂಪರ್ಕಿಸಿತ್ತು. ಆದರೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮುಂದಿನ ಟಿ20 ವಿಶ್ವಕಪ್ ವರೆಗೆ ದ್ರಾವಿಡ್ ಅವರನ್ನು ಮುಂದುವರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ. 

ಒಂದು ವೇಳೆ ಬಿಸಿಸಿಐನ ಈ ಪ್ರಸ್ತಾಪವನ್ನು ದ್ರಾವಿಡ್ ಕೈಗೆತ್ತಿಕೊಂಡರೆ, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರಂತಹ ಸಹಾಯಕ ಸಿಬ್ಬಂದಿಯ ಗುಂಪಿಗೂ ಕೂಡ ಹೊಸ ಗುತ್ತಿಗೆಗಳನ್ನು ನೀಡುವ ಸಾಧ್ಯತೆಯಿದೆ.

SCROLL FOR NEXT