ಕ್ರಿಕೆಟ್

'ಶೇ.99ರಷ್ಟು'..: ಪಾಕಿಸ್ತಾನ ವಿರುದ್ಧ ಪಂದ್ಯಕ್ಕೆ ಶುಭ್ ಮನ್ ಗಿಲ್ ಲಭ್ಯತೆ ಕುರಿತು ನಾಯಕ ರೋಹಿತ್ ಶರ್ಮಾ ಮಹತ್ವದ ಮಾಹಿತಿ!!

Srinivasamurthy VN

ಅಹ್ಮದಾಬಾದ್: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಾಳಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಈ ಪಂದ್ಯದಲ್ಲಿ ಭಾರತ ತಂಡದ ಸ್ಫೋಟಕ ಆಟಗಾರ ಶುಭ್ ಮನ್ ಗಿಲ್ ಲಭ್ಯತೆ ಕುರಿತು ತಂಡದ ನಾಯಕ ರೋಹಿತ್ ಶರ್ಮಾ ಮಹತ್ವದ ಮಾಹಿತಿ ನೀಡಿದ್ದಾರೆ.

ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುವ ವಿಶ್ವಾಸದಲ್ಲಿರುವ ಭಾರತದ ಶುಭಮನ್ ಗಿಲ್ ಅವರು ಫಿಟ್ ಆಗಿದ್ದು, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಜ್ಜಾಗಲಿದ್ದಾರೆ ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ಮಹತ್ವದ ಮಾಹಿತಿ ನೀಡಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನ ಎದುರಿನ ಪಂದಕ್ಕೆ ಶುಭ್ ಮನ್ ಗಿಲ್ ಶೇ 99ರಷ್ಟು ಲಭ್ಯರಿರಲಿದ್ದಾರೆ ಎಂದು ಹೇಳಿದ್ದಾರೆ.

ನೆಟ್ಸ್ ನಲ್ಲಿ ಬೆವರಿಳಿಸಿದ ಗಿಲ್
ಇನ್ನು ಶುಕ್ರವಾರ ಗಿಲ್ ಅವರು ನೆಟ್ಸ್‌ನಲ್ಲಿ ಲವಲವಿಕೆಯಿಂದ ಅಭ್ಯಾಸ ಮಾಡಿದರು. ಬೌಲರ್‌ಗಳ ಎಸೆತಗಳನ್ನು ಎದುರಿಸಿದರು. ಮೊಹಮ್ಮದ್ ಶಮಿ, ಆರ್.ಅಶ್ವಿನ್ ಅವರ ಎಸೆತಗಳನ್ನು ಅಡಿದರು. ಸುಮಾರು 20 ನಿಮಿಷ ಥ್ರೋಡೌನ್ ಪರಿಣತರ ಎದುರು ಬ್ಯಾಟಿಂಗ್ ಅಭ್ಯಾಸ ಮಾಡಿದರು.

ಕೆಲವೇ ದಿನಗಳ ಹಿಂದಷ್ಟೇ ಶುಭ್ ಮನ್ ಗಿಲ್ ಅವರಿಗೆ ಡೆಂಗ್ಯೂ ಜ್ವರ ಇರುವುದು ಪತ್ತೆಯಾಗಿತ್ತು. ಅವರ ರಕ್ತದ ಪ್ಲೇಟ್‌ಲೆಟ್ ಸಂಖ್ಯೆಯು 70 ಸಾವಿರಕ್ಕೆ ಇಳಿದಿತ್ತು. ಚೆನ್ನೈನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಆದರೆ ಮೊಟೇರಾ ಕ್ರೀಡಾಂಗಣದ ನೆಟ್ಸ್‌ನಲ್ಲಿ ತಾಲೀಮು ನಡೆಸುವ ಮೂಲಕ ನಾಳಿನ ಹೈವೋಲ್ಟೇಜ್ ಪಂದ್ಯಕ್ಕೆ ತಾವು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.

ಇನ್ನು ಕಳೆದ ಎರಡೂ ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದ ಇಶಾನ್ ಕಿಶನ್ ಫೀಲ್ಡಿಂಗ್ ಅಭ್ಯಾಸ ನಡೆಸಿದರು. ಆದರೆ ನೆಟ್ಸ್‌ನಲ್ಲಿ ಬ್ಯಾಟ್ ಬೀಸಲಿಲ್ಲ.
 

SCROLL FOR NEXT