ಕ್ರಿಕೆಟ್

ಐಸಿಸಿ ವಿಶ್ವಕಪ್: ಪ್ರಬಲ ಇಂಗ್ಲೆಂಡ್ ಗೆ ಶಾಕ್ ಕೊಟ್ಟ ಆಫ್ಘಾನಿಸ್ತಾನ, ಹಾಲಿ ಚಾಂಪಿಯನ್ ಗಳ ವಿರುದ್ಧ 69ರನ್ ಗಳ ಭರ್ಜರಿ ಗೆಲುವು

Srinivasamurthy VN

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂದು ಅಚ್ಚರಿ ಫಲಿತಾಂಶವೊಂದು ಹೊರಬಿದ್ದಿದ್ದು, ಹಾಲಿ ಚಾಂಪಿಯನ್ ಹಾಗೂ ಟೂರ್ನಿಯಲ್ಲಿ ಪ್ರಬಲ ತಂಡ ಎಂದು ಗುರುತಿಸಿಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಆಘಾತ ನೀಡಿದ್ದು, 69ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 13ನೇ ಪಂದ್ಯದಲ್ಲಿ ಕ್ರಿಕೆಟ್ ಜನಕ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ಅಫ್ಘಾನಿಸ್ತಾನ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಆಫ್ಘಾನಿಸ್ತಾನ ನೀಡಿದ್ದ 285ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ರಷೀದ್ ಖಾನ್ ರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 40.3 ಓವರ್ ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 215 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. 

ಆ ಮೂಲಕ  69ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಆ ಮೂಲಕ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ದುರ್ಬಲ ಎನಿಸಿದ್ದ ಅಫ್ಘಾನಿಸ್ತಾನ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದೆ. ಇದೇ ವೇಳೆ ಅಫ್ಘಾನಿಸ್ತಾನ ತಂಡಕ್ಕೆ ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಗೆಲುವು ಇದಾಗಿದೆ.

ವಿವರ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ರಹಮಾನುಲ್ಲಾ ಗುರ್ಬಾಜ್ ಮತ್ತು ಇಕ್ರಮ್ ಅಲಿಖಿಲ್ ಅವರ ಅರ್ಧಶತಕದ ನೆರವಿನಿಂದ 49.5 ಓವರ್‌ಗಳಲ್ಲಿ 284 ರನ್‌ಗಳಿಗೆ ಸರ್ವಪತನ ಕಂಡಿತು. 285 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡ 40.3 ಓವರ್‌ಗಳಲ್ಲಿ ಕೇವಲ 215 ರನ್‌ಗಳಿಗೆ ಆಲೌಟ್ ಆಗಿ ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು.

ಆಫ್ಘಾನಿಸ್ತಾನ ಪರ ರಷೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ತಲಾ 3 ವಿಕೆಟ್ ಪಡೆದರೆ, ಮಹಮದ್ ನಬಿ 2 ಮತ್ತು ಫಜಲ್ಹಕ್ ಫಾರೂಕಿ ಮತ್ತು ನವೀನ್ ಉಲ್ ಹಕ್ ತಲಾ 1 ವಿಕೆಟ್ ಪಡೆದರು. ಅಂತೆಯೇ 3 ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಪತನಕ್ಕೆ ಕಾರಣರಾದ ಮುಜೀಬ್ ಉರ್ ರೆಹಮಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
 

SCROLL FOR NEXT