ಕೊಲಂಬೋ: ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಬರೊಬ್ಬರಿ 110 ರನ್ ಗಳ ಜಯಭೇರಿ ಭಾರಿಸಿದ್ದು ಆ ಮೂಲಕ 2-0 ಅಂತರದಲ್ಲಿ ಐತಿಹಾಸಿಕ ಸರಣಿ ಜಯ ಸಾಧಿಸಿದೆ.
T20 ವಿಶ್ವಕಪ್, ಸಿಂಹಳೀಯರ ವಿರುದ್ಧ T20 ಸರಣಿ ಗೆಲುವಿನ ಉತ್ಸಾಹದಲ್ಲಿದ್ದ ಭಾರತ ತಂಡಕ್ಕೆ ಶ್ರೀಲಂಕಾ ತಂಡವು ಏಕದಿನ ಸರಣಿಯಲ್ಲಿ ಆಘಾತ ನೀಡಿದ್ದು 3ನೇ ಏಕದಿನ ಪಂದ್ಯದಲ್ಲಿ 110 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ 2-0 ಅಂತರದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಇಂದು ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 249 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ಕೇವಲ 138 ರನ್ ಗಳಿಗೆ ಆಲೌಟ್ ಆಗಿ 110 ರನ್ ಗಳ ಅಂತರದಲ್ಲಿ ಹೀನಾಯ ಸೋಲಿಗೆ ಶರಣಾಯಿತು.
ಭಾರತದ ಪರ ನಾಯಕ ರೋಹಿತ್ ಶರ್ಮಾ 35 ರನ್, ವಿರಾಟ್ ಕೊಹ್ಲಿ 20 ರನ್, ವಾಷಿಂಗ್ಟನ್ ಸುಂದರ್ 30ರನ್ ಸಿಡಿಸಿದ್ದು ಬಿಟ್ಟರೆ ಉಳಿದಾವ ಆಟಗಾರರೂ ಎರಡಂಕಿ ಮೊತ್ತ ಕೂಡ ದಾಟಲಿಲ್ಲ. ಪ್ರಮುಖವಾಗಿ ಆರಂಭಿಕ ಆಟಗಾರ ಶುಭ್ ಮನ್ ಗಿಲ್ 6 ರನ್ ಗಳಿಸಿ ಔಟಾದರೆ ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ 6, ಶ್ರೇಯಸ್ ಅಯ್ಯರ್ 8, ಅಕ್ಸರ್ ಪಟೇಲ್ 2 ರನ್ ಗಳಿಸಿದರು.
ಕೆಳ ಕ್ರಮಾಂಕದಲ್ಲಿ ರಿಯಾನ್ ಪರಾಗ್ 15 ರನ್ ಗಳಿಸಿದರೆ, ಶಿವಂ ದುಬೆ 9 ರನ್, ಕುಲದೀಪ್ ಯಾದವ್ ಕೇವಲ 6ರನ್ ಗಳಿಸಿ ಔಟಾದರು. ಅಂತಿಮವಾಗಿ ಭಾರತ ತಂಡ 26.1 ಓವರ್ ನಲ್ಲಿ ಕೇವಲ 138 ರನ್ ಗಳಿಸಿ ಆಲೌಟ್ ಆಯಿತು.
ಶ್ರೀಲಂಕಾ ಪರ ದುನಿತ್ ವೆಲ್ಲಲಾಗೆ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ ವ್ಯಾಂಡರ್ಸೇ, ಮಹೀಶ ತೀಕ್ಷ್ಣ ತಲಾ 2 ಮತ್ತು ಫರ್ನಾಂಡೋ 1 ವಿಕೆಟ್ ಪಡೆದರು.
ಶ್ರೀಲಂಕಾಗೆ ಐತಿಹಾಸಿಕ ಸರಣಿ ಜಯ
ಇನ್ನು ಈ ಪಂದ್ಯದ ಗೆಲುವಿನ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ ತಂಡ 2-0 ಅಂತರಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ಆ ಮೂಲಕ ಐತಿಹಾಸಿಕ ಸರಣಿ ಜಯ ಸಾಧಿಸಿದೆ. 1997ರ ಬಳಿಕ ಶ್ರೀಲಂಕಾ ಭಾರತದ ವಿರುದ್ಧ ಯಾವುದೇ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿರಲಿಲ್ಲ. ಆದರೆ ಇದೀಗ ಅಂದರೆ ಬರೊಬ್ಬರಿ 27 ವರ್ಷಗಳ ಆ ಕಳಪೆ ದಾಖಲೆಯನ್ನು ಶ್ರೀಲಂಕಾ ಮುರಿದುಕೊಂಡಿದೆ.