ಮುಂಬೈ: ಬಾಲ್ಯದ ಗೆಳೆಯರಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಮತ್ತೆ ವೇದಿಕೆಯೊಂದರಲ್ಲಿ ಪರಸ್ಪರ ಭೇಟಿಯಾಗಿದ್ದು, ಈ ವೇಳೆ ಸಚಿನ್ ರನ್ನು ಕಂಡ ಕಾಂಬ್ಳಿ ಭಾವುಕರಾದ ಘಟನೆ ನಡೆಯಿತು.
ಮುಂಬೈನಲ್ಲಿ ನಡೆದ ಲೆಜೆಂಡ್ ಕ್ರಿಕೆಟ್ ತರಬೇತುದಾರ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಅನಾವರಣ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ಕಾಂಬ್ಳಿ ತಮ್ಮ ಬಾಲ್ಯದ ಗೆಳೆಯನನ್ನು ತಬ್ಬಿಕೊಂಡು ಭಾವುಕರಾಗಿ ಅಸಹಾಯಕತೆಯನ್ನು ತೋಡಿಕೊಂಡರು.
ಸ್ವತಃ ಸಚಿನ್ ತೆಂಡೂಲ್ಕರ್ ವಿನೋದ್ ಕಾಂಬ್ಳಿ ಬಳಿ ಹೋಗಿ ಆತ್ಮೀಯವಾಗಿ ಮಾತನಾಡಿಸಿದ್ದು, ಈ ವೇಳೆ ಕಾಂಬ್ಳಿ ಕೆಲ ಕ್ಷಣಗಳ ಕಾಲ ಸಚಿನ್ ರನ್ನು ಕಂಡು ಹಿಡಿಯಲಿಲ್ಲ. ಬಳಿಕ ಬಂದಿರುವುದು ಸಚಿನ್ ತೆಂಡೂಲ್ಕರ್ ಎಂದು ಮನಗಂಡು ಅವರನ್ನು ತಬ್ಬಿ ಭಾವುಕರಾದರು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ಮತ್ತೋರ್ವ ಗಣ್ಯರು ಕಾಂಬ್ಳಿಯಿಂದ ಸಚಿನ್ ರನ್ನು ಬಲವಂತವಾಗಿ ಬಿಡಿಸಿ ಸಚಿನ್ ಕುಳಿತುಕೊಳ್ಳುವಂತೆ ನೆರವಾದರು. ಬಳಿಕ ಕೆಲ ಕ್ಷಣಗಲ ಕಾಲ ಕಾಂಬ್ಳಿ ಸಚಿನ್ ರನ್ನೇ ದಿಟ್ಟಿಸುತ್ತಿದ್ದು ಕಂಡು ಬಂತು.
ಇನ್ನು ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ರಮಾಕಾಂತ್ ಅಚ್ರೇಕರ್ ಅವರ ವಿದ್ಯಾರ್ಥಿಗಳು. ಬಾಲ್ಯದಲ್ಲಿ ಇಬ್ಬರು ಜೊತೆಯಾಗಿ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಅದರಲ್ಲೂ ಶಾಲಾ ಕ್ರಿಕೆಟ್ನಲ್ಲಿ 664 ರನ್‌ಗಳ ಜೊತೆಯಾಟವಾಡುವ ಮೂಲಕ ದಾಖಲೆ ನಿರ್ಮಿಸಿದ್ದರು.
ಇದಾದ ಬಳಿಕ ಇಬ್ಬರು ಟೀಮ್ ಇಂಡಿಯಾ ಪರ ಕಣಕ್ಕಿಳಿದರು. ಆದರೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಅಂಗಳದ ಮಾಸ್ಟರ್ ಬ್ಲಾಸ್ಟರ್ ಆದರೆ, ವಿನೋದ್ ಕಾಂಬ್ಳಿ ಅವರ ಕೆರಿಯರ್ ಉತ್ತುಂಗದಿಂದ ಪಾತಾಳಕ್ಕೆ ಕುಸಿಯುತ್ತಾ ಸಾಗಿತು. ಇದರ ನಡುವೆ ಹಲವು ವಿವಾದಗಳೊಂದಿಗೆ ಕಾಂಬ್ಳಿ ಗುರುತಿಸಿಕೊಂಡರು. ಇದೀಗ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ವಿನೋದ್ ಕಾಂಬ್ಳಿ ನಡೆದಾಡಲು ಬರೋಬ್ಬರನ್ನು ಆಶ್ರಯಿಸಬೇಕಾದ ಪರಿಸ್ಥಿತಿಯಲ್ಲಿದೆ. ಅಲ್ಲದೆ ಆರ್ಥಿಕವಾಗಿಯೂ ಸಂಕಷ್ಟದಲ್ಲಿದ್ದಾರೆ.
ಟೀಮ್ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನಾಡಿರುವ ವಿನೋದ್ ಕಾಂಬ್ಳಿ 2 ದ್ವಿಶತಕ, 4 ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ 104 ಏಕದಿನ ಪಂದ್ಯಗಳಲ್ಲಿ 2 ಶತಕ ಹಾಗೂ 14 ಅರ್ಧಶತಕಗಳೊಂದಿಗೆ 2477 ರನ್ಗಳಿಸಿದ್ದಾರೆ.
ಇನ್ನು ಈ ಸಮಾರಂಭದಲ್ಲಿ ಅಚ್ರೇಕರ್ ಅವರ ಶಿಷ್ಯರಾದ ಪರಸ್ ಮಾಂಬ್ರೆ, ಪ್ರವೀಣ್ ಆಮ್ರೆ, ಬಲ್ವಿಂದರ್ ಸಿಂಗ್ ಸಂಧು, ಸಂಜಯ್ ಬಂಗಾರ್ ಮತ್ತು ಸಮೀರ್ ದಿಘೆ ಕೂಡ ಭಾಗವಹಿಸಿದ್ದರು.