ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.
ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡ 2ನೇ ದಿನದಾಟದ ಮುಕ್ತಾಯದ ವೇಳೆಗೆ 7 ವಿಕೆಟ್ ನಷ್ಟಕ್ಕೆ 405 ರನ್ ಕಲೆಹಾಕಿದೆ.
ಒಂದೆಡೆ ಆಸ್ಟ್ರೇಲಿಯಾ ತಂಡ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವಂತೆಯೇ ಮತ್ತೊಂದೆಡೆ ಭಾರತದ ವಿಕೆಟ್ ಕೀಪರ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ರಿಷಭ್ ಪಂತ್ ವಿಶೇಷ ಸಾಧನೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಬ್ ಪಂತ್ 150 ಮಂದಿಯನ್ನು ಔಟ್ ಮಾಡುವ ಮೂಲಕ ವಿಶಿಷ್ಠ ದಾಖಲೆಗೆ ಪಾತ್ರರಾಗಿದ್ದಾರೆ. 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾ (21) ಕ್ಯಾಚ್ ಹಿಡಿಯುವುದರೊಂದಿಗೆ ರಿಷಭ್ ಪಂತ್ 150ನೇ ಬಲಿ ಪಡೆದ ಸಾಧನೆ ಮಾಡಿದ್ದಾರೆ.
ಆ ಮೂಲಕ ಈ ಮೈಲುಗಲ್ಲು ಸಾಧಿಸಿದ ಭಾರತದ 3ನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. 92 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ಕೇವಲ ಮೂವರು ವಿಕೆಟ್ ಕೀಪರ್ಗಳು ಮಾತ್ರ 150+ ಗಿಂತ ಹೆಚ್ಚು ಆಟಗಾರರನ್ನು ಔಟ್ ಮಾಡಿದ್ದು, ಈ ಪಟ್ಟಿಗೆ ಇದೀಗ ರಿಷಬ್ ಪಂತ್ ಕೂಡ ಸೇರ್ಪಡೆಯಾಗಿದ್ದಾರೆ.
ಧೋನಿ ಅಗ್ರ ಸ್ಥಾನ
ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ 150ಕ್ಕೂ ಹೆಚ್ಚು ವಿಕೆಟ್ ಪಡೆದ ವಿಕೆಟ್ ಕೀಪರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. 2005 ರಿಂದ 2014 ನಡುವೆ ಟೀಮ್ ಇಂಡಿಯಾ ಪರ 90 ಟೆಸ್ಟ್ ಪಂದ್ಯಗಳಲ್ಲಿ 166 ಇನಿಂಗ್ಸ್ ಆಡಿರುವ ಮಹೇಂದ್ರ ಸಿಂಗ್ ಧೋನಿ 256 ಕ್ಯಾಚ್ ಹಾಗೂ 38 ಸ್ಟಂಪ್ಗಳನ್ನು ಮಾಡಿದ್ದಾರೆ.
ಈ ಮೂಲಕ ಒಟ್ಟು 294 ಬ್ಯಾಟರ್ಗಳನ್ನು ಔಟ್ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಕರ್ನಾಟಕದ ಸೈಯ್ಯದ್ ಕಿರ್ಮಾನಿ. 1976 ರಿಂದ 1986 ರ ನಡುವೆ ಟೀಮ್ ಇಂಡಿಯಾ ಪರ 88 ಟೆಸ್ಟ್ ಪಂದ್ಯಗಳಲ್ಲಿ 151 ಇನಿಂಗ್ಸ್ ಆಡಿರುವ ಕಿರ್ಮಾನಿ 160 ಕ್ಯಾಚ್ ಹಾಗೂ 38 ಸ್ಟಂಪ್ಗಳೊಂದಿಗೆ ಒಟ್ಟು 198 ಬಲಿ ಪಡೆದಿದ್ದಾರೆ.
3ನೇ ಸ್ಥಾನದಲ್ಲಿ ಪಂತ್
ಇದೀಗ ಈ ಸಾಧಕರ ಪಟ್ಟಿಗೆ ರಿಷಭ್ ಪಂತ್ ಕೂಡ ಸೇರ್ಪಡೆಯಾಗಿದ್ದಾರೆ. ಈವರೆಗೆ 41* ಟೆಸ್ಟ್ ಪಂದ್ಯಗಳನ್ನಾಡಿರುವ ರಿಷಭ್ ಪಂತ್ 80 ಇನಿಂಗ್ಸ್ಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದು, ಈ ವೇಳೆ 137 ಕ್ಯಾಚ್ ಹಾಗೂ 15 ಸ್ಟಂಪ್ಗಳನ್ನು ಮಾಡಿದ್ದಾರೆ. ಈ ಮೂಲಕ ಒಟ್ಟು 151 ಬ್ಯಾಟರ್ಗಳನ್ನು ಔಟ್ ಮಾಡಿದ ವಿಶೇಷ ಮೈಲುಗಲ್ಲು ದಾಟಿದ್ದಾರೆ.