ಮೆಲ್ಬೋರ್ನ್: ಆಸಿಸ್ ಯುವ ಆಟಗಾರನಿಗೆ ವಿರಾಟ್ ಕೊಹ್ಲಿ ಢಿಕ್ಕಿಯಾಗಿದ್ದು ವ್ಯಾಪಕ ಸುದ್ದಿಯಾಗುತ್ತಿರುವಂತೆಯೇ ಅತ್ತ ಕೊಹ್ಲಿ ಶಿಷ್ಯ ಮಹಮದ್ ಸಿರಾಜ್ ತನಗೆ ಢಿಕ್ಕಿ ಹೊಡೆದು ನಕ್ಕ ಆಸಿಸ್ ಆಟಗಾರನಿಗೆ ಮೈದಾನದಲ್ಲೇ ಮರ್ಮಾಘಾತ ನೀಡಿದ್ದಾರೆ.
ಅಚ್ಚರಿಯಾದರೂ ಇದು ಸತ್ಯ... ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ನಡೆಸಿತ್ತಾದರೂ, ಭಾರತದ ವೇಗಿಗಳ ಖತರ್ನಾಕ್ ಎಸೆತಗಳಿಂದ 'ಮರ್ಮಾಘಾತ' ಅನುಭವಿಸಿದೆ.
ಪ್ರಮುಖವಾಗಿ ಈ ಇನ್ನಿಂಗ್ಸ್ ನಲ್ಲಿ ಭಾರತದ ವೇಗಿ ಮಹಮದ್ ಸಿರಾಜ್ ಅಷ್ಟೇನೂ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡದಿದ್ದರೂ ಆಸಿಸ್ ಬ್ಯಾಟರ್ ಮಾರ್ನಸ್ ಲಾಬುಶ್ಚೇನ್ ಗೆ ಆಘಾತ ನೀಡಿದ್ದಾರೆ.
ಆಸ್ಟ್ರೇಲಿಯಾ ಇನ್ನಿಂಗ್ಸ್ ನ 33ನೇ ಓವರ್ ವೇಳೆ ಈ ಘಟನೆ ನಡೆದಿದ್ದು, ಮೊದಲು ರನ್ ಕದಿಯುವ ವೇಳೆ ಆಸಿಸ್ ಬ್ಯಾಟರ್ ಲಾಬುಶ್ಚೇನ್ ಅನಿರೀಕ್ಷಿತವಾಗಿ ಬೌಲರ್ ಸಿರಾಜ್ ಗೆ ಢಿಕ್ಕಿ ಹೊಡೆಯುತ್ತಾರೆ. ಲಾಬುಶ್ಚೇನ್ ಬ್ಯಾಟ್ ಸಿರಾಜ್ ತೊಡೆಗೆ ತಗುಲಿ ಅವರು ಅಲ್ಲೇ ಕೆಲ ಹೊತ್ತು ಬಗ್ಗಿ ನೋವು ಅನುಭವಿಸುತ್ತಾರೆ. ಆದರೆ ಮತ್ತೊಂದು ಬದಿಯಲ್ಲಿ ಇದನ್ನು ನೋಡಿದ ಲಾಬುಶ್ಚೇನ್ ತನ್ನ ಸಹ ಆಟಗಾರನೊಂದಿಗೆ ತಮಾಷೆ ಮಾಡಿಕೊಂಡು ನಗುತ್ತಾರೆ.
ಈ ಬೆಳವಣಿಗೆ ಬೆನ್ನಲ್ಲೇ ಮಹಮದ್ ಸಿರಾಜ್ ಕೊಂಚ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುತ್ತಾರೆ. ಸಿರಾಜ್ ಎಸೆತ ಆ ಮೊದಲ ಎಸೆತ ನೇರವಾಗಿ ಲಾಬುಶ್ಚೇನ್ ರ ತೊಡೆ ಸಂಧಿಗೆ ಬೀಳುತ್ತದೆ. ಕೂಡಲೇ ಕುಸಿಯುವ ಲಾಬುಶ್ಚೇನ್ ಬಳಿಕ ಕೊಂಚ ಸುಧಾರಿಸಿಕೊಳ್ಳುತ್ತಾರೆ.
ಲಾಬುಶ್ಚೇನ್ ಈ ಆಘಾತದಿಂದ ಚೇತರಿಸಿಕೊಂಡು ಬ್ಯಾಟಿಂಗ್ ಮಾಡಿದರೆ ನಂತರದ ಎಸೆತ ಕೂಡ ಅವರ ತೊಡೆ ಸಂಧಿಗೆ ಬೀಳುತ್ತದೆ. ಇದರಿಂದ ಅಕ್ಷರಶಃ ಲಾಬುಶ್ಚೇನ್ ಕುಸಿದು ಬೀಳುವ ಹಂತಕ್ಕೆ ಬರುತ್ತಾರೆ. ಕೂಡಲೇ ಫಿಸಿಯೋಗಳನ್ನು ಮೈದಾನಕ್ಕೆ ಕರೆಯುವ ಅವರು ಚಿಕಿತ್ಸೆ ಪಡೆಯುತ್ತಾರೆಯಾದರೂ ಅದು ತಾತ್ಕಾಲಿಕವಾಗಿರುತ್ತದೆ.
ಬಳಿಕ ಲಾಬುಶ್ಚೇನ್ ರಕ್ಷಣಾತ್ಮಕ ಆಟದ ಮೊರೆ ಹೋಗಿ ಆಸಿಸ್ ಪರ ಉತ್ತಮ ಇನ್ನಿಂಗ್ಸ್ ಕಟ್ಟುತ್ತಾರೆ. 72 ರನ್ ಸಿಡಿಸುವ ಲಾಬುಶ್ಟೇನ್ ವಾಷಿಂಗ್ಟನ್ ಸುಂದರ್ ಬೌಲಿಂಗ್ ನಲ್ಲಿ ಔಟಾದರು.