ಹನುಮ ವಿಹಾರಿ
ಹನುಮ ವಿಹಾರಿ 
ಕ್ರಿಕೆಟ್

ರಣಜಿ ಟ್ರೋಫಿ: ಕ್ರಿಕೆಟ್ ನಲ್ಲೂ ರಾಜಕೀಯ, ನಾಯಕತ್ವ ತೊರೆಯಲು ಒತ್ತಡ.. ಆಂಧ್ರದ ಪರ ಇನ್ನೆಂದೂ ಆಡಲ್ಲ: ಹನುಮ ವಿಹಾರಿ ಆಕ್ರೋಶ!

Srinivasamurthy VN

ಹೈದರಾಬಾದ್: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಹನುಮ ವಿಹಾರಿ ಕ್ರಿಕೆಟ್ ಮಂಡಳಿ ವಿರುದ್ಧ ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನೆಂದೂ ಆಂಧ್ರ ಪ್ರದೇಶ ತಂಡದ ಪರ ಆಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು.. ರಣಜಿ ಟೂರ್ನಿ ವೇಳೆ ನಡೆದ ಒಂದು ಸಣ್ಣ ಗಲಾಟೆ ಇಷ್ಟೆಲ್ಲಾ ರಾದ್ಧಾಂತಕ್ಕೆ ದಾರಿ ಮಾಡಿದ್ದು, ಆಂಧ್ರ ಪ್ರದೇಶದ ಪ್ರಭಾವಿ ರಾಜಕಾರಣಿಯ ಮಗನೊಂದಿಗಿನ ವಿರಸ ಕ್ರಮೇಣ ರಾಜಕೀಯ ತಿರುವು ಪಡೆದು ಹನುಮ ವಿಹಾರಿ ಆಂಧ್ರ ಪ್ರದೇಶ ಕ್ರಿಕೆಟ್ ತಂಡದ ನಾಯಕತ್ವ ತೊರೆಯುವಂತೆ ಮಾಡಿದೆ. ಅಲ್ಲದೆ ಹಿರಿಯ ಆಟಗಾರನ ಬೆನ್ನಿಗೆ ನಿಲ್ಲಬೇಕಿದ್ದ ಆಂಧ್ರ ಪ್ರದೇಶ ಕ್ರಿಕೆಟ್ ಮಂಡಳಿ ಕೂಡ ಪ್ರಭಾವಿ ರಾಜಕಾರಣಿಯ ಒತ್ತಡಕ್ಕೆ ಮಣಿದಿರುವುದು ಟೀಂ ಇಂಡಿಯಾ ಬ್ಯಾಟರ್ ಹನುಮ ವಿಹಾರಿ ಆಕ್ರೋಶಕ್ಕೆ ಕಾರಣವಾಗಿದೆ.

ತಮಗಾದ ಕರಾಳ ಪರಿಸ್ಥಿತಿ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೊರಹಾಕಿರುವ ಹನುಮ ವಿಹಾರಿ, ರಾಜಕೀಯ ವ್ಯಕ್ತಿಯ ಮಗನೊಬ್ಬನ ವಿಚಾರಕ್ಕೆ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ನನ್ನನ್ನು ವಿದಾಯ ಹೇಳುವಂತೆ ಒತ್ತಡ ಹೇರಿತ್ತು. ತಮ್ಮ ತಂಡದ ಆಟಗಾರರು ತನ್ನನ್ನು ಬೆಂಬಲಿಸಿದ ಪತ್ರವನ್ನೂ ಕೂಡ ವಿಹಾರಿ ಹಂಚಿಕೊಂಡಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಎಂದಿಗೂ ಆಂಧ್ರ ತಂಡದ ಪರವಾಗಿ ಆಡುವುದೇ ಇಲ್ಲ ಎಂದು ಶಪಥ ಮಾಡಿದ್ದಾರೆ.

ಹನುಮವಿಹಾರಿ ಪೋಸ್ಟ್ ನಲ್ಲಿ ಏನಿದೆ?

"ಕ್ವಾರ್ಟರ್‌ ಫೈನಲ್‌ ಪಂದ್ಯದ ಕೊನೆಯವರೆಗೂ ನಾವು ಕಠಿಣ ಪರಿಶ್ರಮವನ್ನು ಪಟ್ಟಿದ್ದೆವು. ಮತ್ತೊಂದು ಅಂತಿಮ ಎಂಟರ ಪಂದ್ಯದಲ್ಲಿ ಸೋಲು ಅನುಭವಿಸಲು ನಮಗೆ ಧೈರ್ಯವಿದೆ. ಆದರೆ, ಕೆಲ ಸಂಗತಿಗಳನ್ನು ಇಲ್ಲಿ ತಿಳಿಸಬೇಕಾದ ಕಾರಣ ನಾನು ಇಲ್ಲಿ ಪೋಸ್ಟ್‌ ಮಾಡಿದ್ದೇನೆ. ಬಂಗಾಳ ವಿರುದ್ಧದ ಮೊದಲ ಪಂದ್ಯಕ್ಕೆ ನಾನು ಆಂಧ್ರ ತಂಡಕ್ಕೆ ನಾಯಕನಾಗಿದ್ದೆ. ಈ ಪಂದ್ಯದಲ್ಲಿ ನಾನು 17ನೇ ಆಟಗಾರನ ವಿರುದ್ಧ ಜೋರಾಗಿ ಕೂಗಿದ್ದೆ. ಆದರೆ, ಆ ಆಟಗಾರ ನನ್ನ ವಿರುದ್ಧ ಅವರ ಅಪ್ಪನಿಗೆ (ರಾಜಕೀಯ ವ್ಯಕ್ತಿ) ದೂರು ನೀಡಿದ್ದ. ನನ್ನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅವರ ತಂದೆ ಅಸೋಸಿಯೇಷನ್‌ಗೆ ಹೇಳಿದ್ದರು.'

ಕಳೆದ ವರ್ಷ ರನ್ನರ್‌ ಅಪ್‌ ಆಗಿದ್ದ ಬಂಗಾಳ ತಂಡ ನೀಡಿದ್ದ 410 ರನ್‌ಗಳನ್ನು ನಾವು ಚೇಸ್ ಮಾಡಿದ್ದೆವು. ಆದರೆ, ನನ್ನದು ಯಾವುದೇ ತಪ್ಪಿಲ್ಲದಿದ್ರೂ ನನ್ನನ್ನು ನಾಯಕತ್ವದಿಂದ ಕೆಳಗೆ ಇಳಿಯುವಂತೆ ಕೇಳಲಾಗಿತ್ತು. ನಾನು ಆ ಆಟಗಾರನನ್ನು ವೈಯಕ್ತಿಕವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಆಂಧ್ರ ಪರ 7 ವರ್ಷಗಳು ಹಾಗೂ ಭಾರತ ತಂಡದ 16 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಆಟಗಾರನಿಗಿಂತ ಆ ಆಟಗಾರನೇ ಆಂಧ್ರ ಕ್ರಿಕೆಟ್‌ ಮಂಡಳಿಗೆ ಮುಖ್ಯವಾಯಿತು. ನನಗೆ ತುಂಬಾ ಮುಜುಗರವಾಗಿತ್ತು. ಆದರೆ, ತಂಡಕ್ಕೆ ಮತ್ತು ಕ್ರಿಕೆಟ್‌ ಮೇಲೆ ನಾನಿಟ್ಟಿರುವ ಗೌರವದಿಂದಾಗಿ ಈ ಆವೃತ್ತಿಯಲ್ಲಿ ಆಡುವುದನ್ನು ಮುಂದುವರಿಸಿದ್ದೆ. ಆಟಗಾರರು ಹೇಳುವುದನ್ನು ಮಾತ್ರ ಅಸೋಸಿಯೇಷನ್‌ ಕೇಳಬೇಕು. ಏಕೆಂದರೆ ಆಟಗಾರರಿಂದಲೇ ಅಸೋಸಿಯೇಷನ್‌ ಇದೆ. ಇದನ್ನು ಅವರು ಪರಿಗಣಿಸದೆ ಇರುವುದು ದುಖಃದ ವಿಷಯ" ಎಂದು ಹನುಮ ವಿಹಾರಿ ಅಳಲು ತೋಡಿಕೊಂಡಿದ್ದಾರೆ

'ಇನ್ನೆಂದೂ ಆಂಧ್ರ ಪ್ರದೇಶ ಪರ ಆಡಲ್ಲ'

ನಾನು ಅವಮಾನ ಮತ್ತು ಮುಜುಗರಕ್ಕೊಳಗಾಗಿದ್ದೇನೆ ಆದರೆ ನಾನು ಅದನ್ನು ಇಂದಿನವರೆಗೂ ವ್ಯಕ್ತಪಡಿಸಿಲ್ಲ. ನನ್ನ ಆತ್ಮಗೌರವವನ್ನು ಕಳೆದುಕೊಂಡಿರುವ ಆಂಧ್ರದ ಪರವಾಗಿ ನಾನು ಎಂದಿಗೂ ಆಡುವುದಿಲ್ಲ ಎಂದು ನಿರ್ಧರಿಸಿದ್ದೇನೆ. ನಾನು ತಂಡವನ್ನು ಪ್ರೀತಿಸುತ್ತೇನೆ. ನಾವು ಪ್ರತಿ ಋತುವಿನಲ್ಲಿ ಬೆಳೆಯುತ್ತಿರುವ ರೀತಿಯನ್ನು ನಾನು ಪ್ರೀತಿಸುತ್ತೇನೆ. ಆದರೆ ಮಂಡಳಿಯು ನಾವು ಬೆಳೆಯುವುದನ್ನು ಬಯಸುವುದಿಲ್ಲ. ಹೀಗಾಗಿ ಇನ್ನೆಂದೂ ಆಂಧ್ರ ಪ್ರದೇಶದ ಪರ ಆಡುವುದಿಲ್ಲ ಎಂದು ಹನುಮ ವಿಹಾರಿ ಹೇಳಿದ್ದಾರೆ.

ಅಂದಹಾಗೆ 2023-24ರ ಆವೃತ್ತಿಯ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಮಧ್ಯ ಪ್ರದೇಶ ವಿರುದ್ಧ ಆಂಧ್ರ ಪ್ರದೇಶ ತಂಡ ಕೇವಲ 4 ರನ್‌ಗಳಿಂದ ಸೋಲು ಅನುಭವಿಸಿತು. ಇದರ ಬೆನ್ನಲ್ಲೆ ಹನುಮ ವಿಹಾರಿ ಈ ರೀತಿಯ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹನುಮ ವಿಹಾರಿ ಇಲ್ಲಿಯವರೆಗೂ ಅಂಧ್ರ ಪರ 37 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರ ನಡುವೆ ಹೈದರಾಬಾದ್‌ ತಂಡದ ಪರವೂ ಅವರು ಆಡಿದ್ದಾರೆ.

SCROLL FOR NEXT