ದುಬೈ: ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ವಾಡಿಕೆಯಂತೆ ಐಸಿಸಿ ತನ್ನ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದ್ದು, ಈ ತಂಡದಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಒಟ್ಟು ಆರು ಮಂದಿ ಭಾರತ ತಂಡದ ಆಟಗಾರರಿಗೆ ಸ್ಥಾನ ನೀಡಲಾಗಿದೆ.
ಹೌದು.. ಜೂನ್ 29 ರಂದು ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ನಡೆದ ಐಸಿಸಿ ಟಿ20 ವಿಶ್ವ ಕಪ್ 2024ರ (ICC T20 World Cup 2024) ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟ್ರೋಫಿ ಗೆದ್ದಿತು.
ಆ ಮೂಲಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅಧಿಕೃತ ತೆರೆ ಬಿದ್ದಿದ್ದು, ಇಡೀ ಟೂರ್ನಿಯಲ್ಲಿ ರೋಚಕ ಪಂದ್ಯಗಳು ಮತ್ತು ಅತ್ಯುತ್ತಮ ಪ್ರದರ್ಶನಗಳನ್ನು ಕಂಡವು.
ಅವೆಲ್ಲವನ್ನೂ ಪರಿಗಣಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ , ಫೈನಲ್ ಪಂದ್ಯದ ನಂತರ ಟೀಮ್ ಆಫ್ ದಿ ಟೂರ್ನಮೆಂಟ್ (ICC Team of the Tournament- ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರ ತಂಡ) ಪ್ರಕಟಿಸಿದೆ.
ತಂಡದಲ್ಲಿ ಆರು ಮಂದಿ ಭಾರತೀಯರು
ಐಸಿಸಿ ಟೀಮ್ ಆಫ್ ದಿ ಟೂರ್ನಮೆಂಟ್ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಭಾರತ ತಂಡದ ಆರು ಆಟಗಾರರು ಸ್ಥಾನ ಪಡೆದಿದ್ದಾರೆ.
ತಂಡದ ನಾಯಕನಾಗಿ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಲಾಗಿದ್ದು, ಆಲ್ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯಾ ಮತ್ತು ಅಕ್ಸರ್ ಪಟೇಲ್, ಬ್ಯಾಟಿಂಗ್ ವಿಭಾಗದಲ್ಲಿ ಸೂರ್ಯ ಕುಮಾರ್ ಯಾದವ್, ಬೌಲಿಂಗ್ ವಿಭಾಗದಲ್ಲಿ ಜಸ್ ಪ್ರೀತ್ ಬುಮ್ರಾ ಮತ್ತು ಅರ್ಶ್ ದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ.
ಕೊಹ್ಲಿಗಿಲ್ಲ ಸ್ಥಾನ
ಇನ್ನು ಈ ಹಿಂದಿನ ಬಹುತೇಕ ಎಲ್ಲ ಐಸಿಸಿ ಟೂರ್ನಿ ಉತ್ತಮ ಪ್ರದರ್ಶನ ನೀಡಿ ಐಸಿಸಿ ಟೀಮ್ ಆಫ್ ದಿ ಟೂರ್ನಮೆಂಟ್ ನ ಪ್ರಮುಖ ಭಾಗವಾಗಿರುತ್ತಿದ್ದ ಭಾರತ ತಂಡದ ರನ್ ಮೆಶಿನ್ ವಿರಾಟ್ ಕೊಹ್ಲಿ ಈ ಬಾರಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.
ಫೈನಲ್ ಪಂದ್ಯದಲ್ಲಿನ ಪ್ರದರ್ಶನ ಹೊರತು ಪಡಿಸಿದರೆ ಇಡೀ ಟೂರ್ನಿಯಲ್ಲಿ ಅವರ ಬ್ಯಾಟ್ ನಿಂದ ಹೇಳಿಕೊಳ್ಳುವಂತಹ ರನ್ ಬಂದಿಲ್ಲ. ಹೀಗಾಗಿ ಹಾಲಿ ತಂಡದಿಂದ ಐಸಿಸಿ ಕೊಹ್ಲಿ ಹೆಸರನ್ನು ಕೈಬಿಟ್ಟಿದೆ.
ಫೈನಲ್ ಸೆಣಸಿದ ದಕ್ಷಿಣ ಆಫ್ರಿಕಾ ಆಟಗಾರರೂ ಇಲ್ಲ
ಇನ್ನೂ ಅಚ್ಚರಿ ಎಂದರೆ ಐಸಿಸಿ ಪ್ರಕಟಿಸಿರುವ ಟೀಮ್ ಆಫ್ ದಿ ಟೂರ್ನಮೆಂಟ್ ನಲ್ಲಿ ಭಾರತದ ಎದುರು ಫೈನಲ್ ನಲ್ಲಿ ಕಾದಾಡಿದ ದಕ್ಷಿಣ ಆಫ್ರಿಕಾದ ಯಾವೊಬ್ಬ ಆಟಗಾರ ಕೂಡ ಇಲ್ಲದೇ ಇರುವುದು ಅಚ್ಚರಿ ಮೂಡಿಸಿದೆ. ರನ್ನರ್ ಅಪ್ ಸ್ಥಾನ ಪಡೆದರೂ ದಕ್ಷಿಣ ಆಫ್ರಿಕಾದ ಯಾವುದೇ ಆಟಗಾರರ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿಲ್ಲ.
ಸೆಮಿಫೈನಲ್ ತಲುಪಿದ ನಂತರ ಅಫ್ಘಾನಿಸ್ತಾನದ ಮೂವರು ಆಟಗಾರರು 11ರ ಬಳಗದಲ್ಲಿರುವುದು ವಿಶೇಷ. ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದ ತಲಾ ಒಬ್ಬ ಆಟಗಾರ ಸ್ಥಾನ ಕಂಡುಕೊಂಡಿದ್ದಾರೆ. ಆಯ್ಕೆ ಸಮಿತಿಯಲ್ಲಿ ವೀಕ್ಷಕವಿವರಣೆಗಾರರಾದ ಹರ್ಷ ಭೋಗ್ಲೆ, ಇಯಾನ್ ಬಿಷಪ್, ಕಾಸ್ ನೈದೂ ಮತ್ತು ಐಸಿಸಿ ಕ್ರಿಕೆಟ್ ಜನರಲ್ ಮ್ಯಾನೇಜರ್ ವಾಸಿಮ್ ಖಾನ್ ಇದ್ದರು.
ಐಸಿಸಿ ಟೀಮ್ ಆಫ್ ದಿ ಟೂರ್ನಮೆಂಟ್ ಇಂತಿದೆ.
ರೋಹಿತ್ ಶರ್ಮಾ (ನಾಯಕ) (ಭಾರತ)
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್)(ಅಫ್ಘಾನಿಸ್ತಾನ)
ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್)
ಮಾರ್ಕಸ್ ಸ್ಟೊಯಿನಿಸ್ (ಆಸ್ಟ್ರೇಲಿಯಾ)
ಸೂರ್ಯಕುಮಾರ್ ಯಾದವ್ (ಭಾರತ)
ಹಾರ್ದಿಕ್ ಪಾಂಡ್ಯ (ಆಲ್ರೌಂಡರ್)(ಭಾರತ)
ಅಕ್ಷರ್ ಪಟೇಲ್ (ಆಲ್ರೌಂಡರ್)(ಭಾರತ)
ರಶೀದ್ ಖಾನ್ (ಅಫ್ಘಾನಿಸ್ತಾನ)
ಜಸ್ ಪ್ರೀತ್ ಬುಮ್ರಾ (ಭಾರತ)
ಅರ್ಶ್ ದೀಪ್ ಸಿಂಗ್ (ಭಾರತ)
ಫಜಲ್ಹಾಕ್ ಫಾರೂಕಿ (ಅಫ್ಘಾನಿಸ್ತಾನ)