ಹರಾರೆ: ಇಂದಿನಿಂದ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ವಿಶ್ವ ಚಾಂಪಿಯನ್ ಭಾರತ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧ ಸೆಣಸಲಿದೆ. 2016 ರಿಂದೀಚೆಗೆ ಭಾರತ, ಆಫ್ರಿಕಾ ರಾಷ್ಟ್ರದಲ್ಲಿ ತನ್ನ ಮೊದಲ ದ್ವಿಪಕ್ಷೀಯ ಸರಣಿಯನ್ನು ಆಡಲಿದೆ.
ಸಂಜೆ 4-30ಕ್ಕೆ ಜಿಂಬಾಬ್ವೆ v/s ಭಾರತ ನಡುವಿನ ಪಂದ್ಯ ಪ್ರಾರಂಭವಾಗಲಿದೆ. ಭಾರತದಲ್ಲಿಯೂ ಲೈವ್ ಸ್ಟ್ರೀಮಿಂಗ್ ಮತ್ತು ಟೆಲಿಕಾಸ್ಟ್ ಲಭ್ಯವಿರುತ್ತದೆ. ಜುಲೈ 7 ರಂದು ಎರಡನೇ ಪಂದ್ಯ, ಜುಲೈ 10 ಮೂರನೇ, ಜುಲೈ 13 ರಂದು ನಾಲ್ಕನೇ ಹಾಗೂ ಜುಲೈ 14 ರಂದು ಅಂತಿಮ ಪಂದ್ಯ ನಡೆಯಲಿದೆ.ಎಲ್ಲಾ ಐದು ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿಯೇ ನಡೆಯಲಿವೆ.
ಮೇ ತಿಂಗಳಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 4-1 ಅಂತರದಿಂದ ಸೋತ ನಂತರ ಜಿಂಬಾಬ್ವೆ- ಭಾರತದ ವಿರುದ್ಧದ ಸರಣಿಯಲ್ಲಿ ಆಡಲಿದೆ. ಅವರು ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿರಲಿಲ್ಲ. ದಿಟ್ಟ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಇತ್ತೀಚೆಗೆ T20 ಮಾದರಿಯಿಂದ ನಿವೃತ್ತಿ ಘೋಷಿಸಿದ ನಂತರ ಹರಾರೆಯಲ್ಲಿ ಹೆಚ್ಚು ಬದಲಾಗಿರುವ ಭಾರತ ತಂಡವು ಕಾಣಿಸಿಕೊಳ್ಳಲಿದೆ.
ವಿಶ್ವದ ನಂ. 1 ಟಿ20 ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಅರ್ಷ್‌ದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಈ ಸರಣಿಯಲ್ಲಿ ಗೈರುಹಾಜರಾಗಲಿದ್ದಾರೆ. ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಮತ್ತು ರವಿ ಬಿಷ್ಣೋಯ್ ಒಳಗೊಂಡಿರುವ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಈ ಮಧ್ಯೆ ಐಪಿಎಲ್ 2024 ರ ಅಗ್ರ ಸಿಕ್ಸ್-ಹಿಟ್ಟರ್ ಅಭಿಷೇಕ್ ಶರ್ಮಾ ಜೊತೆಗೆ ಧ್ರುವ್ ಜುರೆಲ್, ರಿಯಾನ್ ಪರಾಗ್ ಮತ್ತು ತುಷಾರ್ ದೇಶಪಾಂಡೆ ಈ ಸರಣಿಯಲ್ಲಿ ಆಡುವ ಸಾಧ್ಯತೆಯಿದೆ.
T20 ವಿಶ್ವಕಪ್ ವಿಜೇತ ತಂಡದಲ್ಲಿದ್ದ ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್, ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ಅವರನ್ನು ಮೊದಲ ಎರಡು ಪಂದ್ಯಗಳಿಗೆ 15 ಸದಸ್ಯರ ಭಾರತ ತಂಡದಿಂದ ಕೈ ಬಿಡಲಾಗಿದೆ. ಇಲ್ಲಿಯವರೆಗೂ ನಡೆದಿರುವ ಪುರುಷರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಜಿಂಬಾಬ್ವೆ ವಿರುದ್ಧ ಮೇಲುಗೈ ಸಾಧಿಸಿದೆ. ಎಂಟು ಮುಖಾಮುಖಿ ಸ್ಪರ್ಧೆಗಳಲ್ಲಿ ಆರರಲ್ಲಿ ಗೆದ್ದಿದ್ದಾರೆ. ಜಿಂಬಾಬ್ವೆ ಭಾರತವನ್ನು ಎರಡು ಬಾರಿ ಸೋಲಿಸಿದೆ.