ಡಂಬುಲ್ಲಾ(ಶ್ರೀಲಂಕಾ): ರಿಚಾ ಘೋಷ್ ಅವರ ಅಬ್ಬರದ ಇನ್ನಿಂಗ್ಸ್ ಮತ್ತು ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಅವರ ಬಲವಾದ ಬ್ಯಾಟಿಂಗ್ ನೆರವಿನಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್ ನಲ್ಲಿ 200 ರನ್ ಗಡಿ ದಾಟಿದ್ದು ಯುಎಇ ವಿರುದ್ಧ 78 ರನ್ ಗಳಿಂದ ಗೆಲುವು ಸಾಧಿಸಿದೆ.
ಡಂಬುಲ್ಲಾದಲ್ಲಿ ನಡೆದ ಪಂದ್ಯದಲ್ಲಿ ಏಷ್ಯಾ ಕಪ್ -2024ರ ಯುಎಇ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಭಾರತ ನೀಡಿದ 202 ರನ್ ಗಳ ಗುರಿ ಬೆನ್ನಟ್ಟಿದ ಯುಎಇ ತಂಡ 7 ವಿಕೆಟ್ ನಷ್ಟಕ್ಕೆ 123 ರನ್ ಪೇರಿಸಲಷ್ಟೇ ಶಕ್ತವಾಗಿದ್ದು 78 ರನ್ ಗಳಿಂದ ಭಾರತಕ್ಕೆ ಶರಣಾಯಿತು.
ಭಾರತದ ಪರ ರಿಚಾ 29 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದ್ದಾರೆ. ರಿಚಾ 12 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ. ಇನ್ನು ನಾಯಕಿ ಹರ್ಮನ್‌ಪ್ರೀತ್ ಏಳು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸಹಾಯದಿಂದ 47 ಎಸೆತಗಳಲ್ಲಿ 66 ರನ್ ಗಳಿಸಿದರು. ಈ ಇಬ್ಬರ ಇನ್ನಿಂಗ್ಸ್‌ನ ಆಧಾರದ ಮೇಲೆ, ಭಾರತ ಟಿ20 ಇಂಟರ್‌ನ್ಯಾಷನಲ್‌ನಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 200ಕ್ಕೂ ಹೆಚ್ಚು ರನ್ ಪೇರಿಸಿತು. ಈ ಮೊದಲು ಟಿ20 ಯಲ್ಲಿ, ಟೀಮ್ ಇಂಡಿಯಾದ ಅತ್ಯಧಿಕ ಸ್ಕೋರ್ 198 ರನ್ ಆಗಿತ್ತು. 2018ರಲ್ಲಿ ಇಂಗ್ಲೆಂಡ್ ವಿರುದ್ಧ ರನ್ ದಾಖಲೆ ಮಾಡಿತ್ತು.
ಇನ್ನುಳಿದಂತೆ ಭಾರತ ಪರ ಶೆಫಾಲಿ ವರ್ಮಾ 37, ಸ್ಮೃತಿ ಮಂದಾನ 13, ಹೇಮಲತಾ 2 ಮತ್ತು ಜೆಮಿಮಾ ರೊಡ್ರಿಗಸ್14 ರನ್ ಬಾರಿಸಿ ಔಟಾಗಿದ್ದಾರೆ. ಯುಎಇ ಪರ ಬೌಲಿಂಗ್ ನಲ್ಲಿ ಕವಿಶಾ 2 ಮತ್ತು ಸಮೈರಾ ಮತ್ತು ಹೀನಾ ತಲಾ 1 ವಿಕೆಟ್ ಪಡೆದಿದ್ದಾರೆ.
ಯುಎಇ ಪರ ಬ್ಯಾಟಿಂಗ್ ನಲ್ಲಿ ಇಶಾ ಒಜಾ 38, ಕವಿಶಾ ಅಜೇಯ 40 ಹಾಗೂ ಖುಷಿ ಶರ್ಮಾ 10 ರನ್ ಪೇರಿಸಿದ್ದಾರೆ. ಭಾರತ ಪರ ಬೌಲಿಂಗ್ ನಲ್ಲಿ ದೀಪ್ತಿ ಶರ್ಮಾ 2, ರೇಣುಕಾ ಸಿಂಗ್, ತನುಜಾ ಕನ್ವರ್, ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ತಲಾ 1 ವಿಕೆಟ್ ಪಡೆದಿದ್ದಾರೆ.