ಮಹಿಳಾ ಏಷ್ಯಾ ಟಿ20 ಕಪ್ 2024ರ ಫೈನಲ್ ಪಂದ್ಯವು ಭಾರತ ತಂಡದ ಮಹಿಳೆಯರು ಮತ್ತು ಶ್ರೀಲಂಕಾ ತಂಡದ ನಡುವೆ ನಡೆಯಿತು. ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಶ್ರೀಲಂಕಾ ಚೊಚ್ಚಲ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಸ್ಮೃತಿ ಮಂಧಾನ ಗರಿಷ್ಠ 60 ರನ್ ಗಳಿಸಿದರು. ಜೆಮಿಮಾ 29 ರನ್ ಕೊಡುಗೆ ನೀಡಿದರು. ಅಂತಿಮವಾಗಿ ರಿಚಾ ಘೋಷ್ 14 ಎಸೆತಗಳಲ್ಲಿ 30 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು. ಶ್ರೀಲಂಕಾ ಪರ ಕವಿಶಾ ದಿಲ್ಹಾರಿ ಎರಡು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಶ್ರೀಲಂಕಾ ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ವಿಶ್ಮಿ ಗುಣರತ್ನೆ 1 ರನ್ ಗಳಿಸಿ ರನೌಟ್ ಆದರು. ಆದರೆ ನಾಯಕಿ ಚಾಮರಿ ಅಟಪಟ್ಟು ಹಾಗೂ ಹರ್ಷಿತಾ ಸಮರವಿಕ್ರಮ ಎಚ್ಚರಿಕೆಯ ಆಟವಾಡಿ ತಂಡಕ್ಕೆ ಗೆಲುವಿನ ಬುನಾದಿ ಹಾಕಿದರು. ಇವರಿಬ್ಬರ ನಡುವೆ ಎರಡನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟವಿತ್ತು. ನಾಯಕಿ ಅಟಪಟ್ಟು 61 ರನ್‌ಗಳ ಇನಿಂಗ್ಸ್ ಆಡಿದರು. ಆದರೆ, ಸಮರವಿಕ್ರಮ ಅಜೇಯರಾಗಿ 69 ರನ್ ಗಳಿಸಿದರು. ಭಾರತದ ಪರ ದೀಪ್ತಿ ಶರ್ಮಾ ಒಂದು ವಿಕೆಟ್ ಪಡೆದರು.
ಭಾರತ ಮಹಿಳಾ ತಂಡ ಏಷ್ಯಾಕಪ್‌ನಲ್ಲಿ 9ನೇ ಫೈನಲ್ ಪಂದ್ಯವನ್ನು ಆಡುತ್ತಿದೆ. ಭಾರತ ತಂಡ ತನ್ನ 8ನೇ ಪ್ರಶಸ್ತಿಯನ್ನು ಸುಲಭವಾಗಿ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಶ್ರೀಲಂಕಾ ಭಾರತದ ಗೆಲುವಿನ ಓಟಕ್ಕೆ ತಡೆ ಹಾಕಿದೆ. ಇದಕ್ಕೂ ಮೊದಲು ಭಾರತ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ. ಶ್ರೀಲಂಕಾ ಮೊದಲ ಬಾರಿಗೆ ಮಹಿಳಾ ಏಷ್ಯಾಕಪ್ ವಶಪಡಿಸಿಕೊಂಡಿದೆ.