ನ್ಯೂಯಾರ್ಕ್: ಅಮೆರಿಕದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಮೈದಾನದಲ್ಲೇ ತಮ್ಮ ಸಿಕ್ಸ್ ಪ್ಯಾಕ್ ತೋರಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಹೌದು.. ಕೊಹ್ಲಿ ಮೈದಾನದಲ್ಲಿ ರನ್ ಗಳಿಸಲು ಎಷ್ಟು ಬದ್ಧತೆ ತೋರಿಸುತ್ತಾರೆಯೋ ತಮ್ಮ ಫಿಟ್ನೆಸ್ ಬಗ್ಗೆಯೂ ಅಷ್ಟೇ ಬದ್ಧತೆ ಹೊಂದಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಮೈದಾನದಲ್ಲಿ ಅಭ್ಯಾಸ ನಡೆಸುವಾಗ ಕೊಹ್ಲಿ ಅಚಾನಕ್ಕಾಗಿ ತಮ್ಮ ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ.
ಮೈದಾನದಲ್ಲಿ ತರಬೇತಿ ನಡೆಸುವಾಗ ಮುಖದಿಂದ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳಲು ಕೊಹ್ಲಿ ತಮ್ಮ ಟೀಶರ್ಚ್ ಎತ್ತಿದ್ದು ಈ ವೇಳೆ ಅವರ ಸಿಕ್ಸ್ ಪ್ಯಾಕ್ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಅಂದಹಾಗೆ ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡಲಿದ್ದು, ಈ ಪಂದ್ಯಕ್ಕೆ ತಯಾರಿ ನಡೆಸುವ ವೇಳೆ ವಿರಾಟ್ ತಮ್ಮ ಸಿಕ್ಸ್ ಪ್ಯಾಕ್ ತೋರಿಸಿ ತಾನೆಷ್ಟು ಬಲಿಷ್ಠ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಿನ್ನೆ(ಶನಿವಾರ) ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಆಡಿರಲಿಲ್ಲ. ವಿಶ್ರಾಂತಿ ಪಡೆದಿದ್ದರು.
ನೃತ್ಯ ಮಾಡಿ ಪ್ರೇಕ್ಷಕರ ರಂಜಿಸಿದ್ದ ಕೊಹ್ಲಿ
ಇದೇ ಅಭ್ಯಾಸದ ವೇಳೆ ಕೊಹ್ಲಿ ನೃತ್ಯವೊಂದನ್ನು ಕೂಡ ಮಾಡಿ ಗಮನಸೆಳೆದರು. ಕೊಹ್ಲಿಗೆ ಡ್ಯಾನ್ಸ್ ಎಂದರೆ ಅಚ್ಚುಮೆಚ್ಚು. ಪಂದ್ಯದ ವೇಳೆಯೂ ಅವರು ಹಲವು ಬಾರಿ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅವರ ಡ್ಯಾನ್ಸಿಂಗ್ ವಿಡಿಯೋ ಕೂಡ ವೈರಲ್ ಆಗುತ್ತಿದೆ.