ನವದೆಹಲಿ: ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಮತ್ತು ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್ ಅವರು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಪೂರ್ವ ದೆಹಲಿಯ ಬಿಜೆಪಿ ಸಂಸದರಾಗಿದ್ದ ಗೌತಮ್ ಗಂಭೀರ್ ಅವರು ತಮ್ಮ ಕ್ರಿಕೆಟ್ ಕೋಚಿಂಗ್ ವೃತ್ತಿಜೀವನದ ಮೇಲೆ ಗಮನ ಹರಿಸಲು ಸಕ್ರಿಯ ರಾಜಕೀಯದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
"ಇತ್ತೀಚಿನ ಚುನಾವಣಾ ಯಶಸ್ಸಿಗೆ ಅಭಿನಂದನೆ ಸಲ್ಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಕೇಂದ್ರ ಗೃಹ ಸಚಿವರಾಗಿ ಅವರ ನಾಯಕತ್ವವು ನಮ್ಮ ರಾಷ್ಟ್ರದ ಭದ್ರತೆ ಮತ್ತು ಸ್ಥಿರತೆಯನ್ನು ಮತ್ತಷ್ಟು ಬಲಪಡಿಸುತ್ತದೆ!" ಎಂದು ಗಂಭೀರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಸಭೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಬದಲಿಗೆ ಭಾರತದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಟಿ20 ವಿಶ್ವಕಪ್ ನಂತರ ದ್ರಾವಿಡ್ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯುವುದಾಗಿ ಖಚಿತಪಡಿಸಿದ್ದಾರೆ.
ಹೊಸ ಕೋಚ್ ನೇಮಕಾತಿಯ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಶೋಕ್ ಮಲ್ಹೋತ್ರಾ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಭಾರತದ ಮುಖ್ಯ ಕೋಚ್ ಹುದ್ದೆಗೆ ಇನ್ನೂ ಯಾವುದೇ ಆಸಕ್ತ ಅಭ್ಯರ್ಥಿಗಳನ್ನು ಸಂದರ್ಶಿಸಿಲ್ಲ ಎಂದು ತಿಳಿದು ಬಂದಿದೆ.