ಬೆಂಗಳೂರು: 2023 ರಲ್ಲಿ 227.9 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಹಿಂದಿಕ್ಕಿ ಭಾರತದ ಅತ್ಯಂತ ಮೌಲ್ಯಭರಿತ ಸೆಲೆಬ್ರಿಟಿ ಎಂದು ನಂಬರ್ 1 ಸ್ಥಾನ ಪಡೆದಿದ್ದಾರೆ. ಅವರು 2022 ರಲ್ಲಿ 176.9 ಮಿಲಿಯನ್ ಡಾಲರ್ ಆದಾಯ ಗಳಿಸುವ ಮೂಲಕ 2 ನೇ ಸ್ಥಾನದಲ್ಲಿದ್ದರು. ಕಳೆದ 1 ವರ್ಷದಲ್ಲಿ ಶೇಕಡಾ 30ರಷ್ಟು ಹೆಚ್ಚಾಗಿದೆ.
2017 ರಲ್ಲಿ, 144 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ, ಸ್ಟಾರ್ ಕ್ರಿಕೆಟರ್ ಮೊದಲ ಬಾರಿಗೆ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿದರು. ಆ ವರ್ಷ ನಂಬರ್ 1 ಸ್ಥಾನ ಪಡೆದರು. ಅಂದಿನಿಂದ, ಇತ್ತೀಚಿನವರೆಗೆ ಕೊಹ್ಲಿಯ ಬ್ರ್ಯಾಂಡ್ ಮೌಲ್ಯ ಶೇಕಡಾ 58ರಷ್ಟು ಏರಿತು. ಕಳೆದ ಏಳು ವರ್ಷಗಳಲ್ಲಿ ನಟ ರಣವೀರ್ ಸಿಂಗ್ ಅವರ ಬ್ರ್ಯಾಂಡ್ ಮೌಲ್ಯವು 383 ಶೇಕಡಾ ಹೆಚ್ಚಾಗಿದೆ. ಅವರು 2017 ರಲ್ಲಿ 42 ಮಿಲಿಯನ್ ಡಾಲರ್ ನೊಂದಿಗೆ 5 ನೇ ಸ್ಥಾನದಲ್ಲಿದ್ದರು. 2023 ರಲ್ಲಿ, ಅವರ ಬ್ರ್ಯಾಂಡ್ ಮೌಲ್ಯವು 203.1 ಮಿಲಿಯನ್ ಡಾಲರ್ ಆಗಿತ್ತು.
ಜಾಗತಿಕ ಸಲಹಾ ಸಂಸ್ಥೆ ಕ್ರೋಲ್ ಬಿಡುಗಡೆ ಮಾಡಿದ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ವರದಿ 2023 ರ ಪ್ರಕಾರ, ಅಗ್ರ 25 ಸೆಲೆಬ್ರಿಟಿಗಳ ಒಟ್ಟಾರೆ ಬ್ರ್ಯಾಂಡ್ ಮೌಲ್ಯವು 1.9 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ, ಇದು ಹಿಂದಿನ ವರ್ಷಕ್ಕಿಂತ 15.5 ಶೇಕಡಾ ಹೆಚ್ಚಾಗಿದೆ.
ಕ್ರೋಲ್‌ನ ಮೌಲ್ಯಮಾಪನ ಸಲಹಾ ಸೇವೆಗಳ ಎಂಡಿ ಅವಿರಾಲ್ ಜೈನ್, 2023 ರಲ್ಲಿ ಕಿಂಗ್ ಕೊಹ್ಲಿ ಅವರು ವರ್ಷವಿಡೀ ತನ್ನ ಆನ್-ಫೀಲ್ಡ್ ಪ್ರದರ್ಶನಗಳ ಬೆಂಬಲದೊಂದಿಗೆ ಭಾರತದಲ್ಲಿನ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಬ್ರ್ಯಾಂಡ್ ಎಂಬ ಬಿರುದನ್ನು ಮರಳಿ ಪಡೆದರು. ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ 375 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅವರ ಬ್ರ್ಯಾಂಡ್ ಮೌಲ್ಯವು ಕಳೆದ ಐದು ವರ್ಷಗಳಲ್ಲಿ ದ್ವಿಗುಣಗೊಂಡಿದೆ.
ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಆಲಿಯಾ ಭಟ್ ಕ್ರಮವಾಗಿ 120.7 ಮಿಲಿಯನ್ ಡಾಲರ್, 111.7 ಮಿಲಿಯನ್ ಡಾಲರ್ ಮತ್ತು 101.1 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ 3, 4 ಮತ್ತು 5 ನೇ ಸ್ಥಾನದಲ್ಲಿದ್ದಾರೆ.
2023 ರಲ್ಲಿ ಟಾಪ್ 20 ಸೆಲೆಬ್ರಿಟಿಗಳ ಉತ್ಪನ್ನ ಬ್ರಾಂಡ್ ಅನುಮೋದನೆಗಳ ಸಂಚಿತ ಸಂಖ್ಯೆ 484 ಕ್ಕೆ ಏರಿದೆ ಎಂದು ವರದಿ ಹೇಳುತ್ತದೆ, 2022 ರಲ್ಲಿ 424 ಉತ್ಪನ್ನ ಬ್ರಾಂಡ್‌ಗಳಿಂದ ಶೇಕಡಾ 14.2ರಷ್ಟು ಹೆಚ್ಚಾಗಿದೆ.