ಆ್ಯಂಟಿಗುವಾ: ಐಸಿಸಿ ಟಿ0 ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿರುವ ಭಾರತ ತಂಡ 197 ರನ್ ಬೃಹತ್ ಗುರಿ ನೀಡಿದೆ.
ಆ್ಯಂಟಿಗುವಾ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅರ್ಧಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶಕ್ಕೆ ಗೆಲ್ಲಲು 197 ರನ್ ಬೃಹತ್ ಗುರಿ ನೀಡಿದೆ. ಬಾಂಗ್ಲಾದೇಶ ಟಾಸ್ ಗೆದ್ದು ಭಾರತ ತಂಡಕ್ಕೆ ಬ್ಯಾಟಿಂಗ್ ಗೆ ಅವಕಾಶ ನೀಡಿತು.
ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಇನ್ನಿಂಗ್ಸ್ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಯಿತು. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ ಮೊದಲ ವಿಕೆಟ್ ಗೆ 39 ರನ್ ಜೊತೆಯಾಟ ನೀಡಿತು. ಈ ಹಂತದಲ್ಲಿ ಅನಗತ್ಯ ಹೊಡತಕ್ಕೆ ಮುಂದಾಗಿ ನಾಯಕ ರೋಹಿತ್ ಶರ್ಮಾ (23 ರನ್) ಶಕೀಬ್ ಅಲ್ ಹಸನ್ ಗೆ ವಿಕೆಟ್ ಒಪ್ಪಿಸಿದರು.
ರೋಹಿತ್ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ 37 ರನ್ ಗಳಿಸಿ ಸಕಿಬ್ ವಿಕೆಟ್ ಒಪ್ಪಿಸಿದರು. ಈ ವೇಳೆ ಕ್ರೀಸ್ ಗೆ ಆಗಮಿಸಿದ ಸೂರ್ಯ ಕುಮಾರ್ ಯಾದವ್ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ನಿರೀಕ್ಷೆ ಹುಟ್ಟುಹಾಕಿದರಾದರೂ 2ನೇ ಎಸೆತದಲ್ಲೇ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಮೂರನೇ ಕ್ರಮಾಂಕದಲ್ಲಿ ರಿಷಬ್ ಪಂತ್ ಉತ್ತಮ ಬ್ಯಾಟಿಂಗ್ ನಡೆಸಿ 2 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 36 ರನ್ ಗಳಿಸಿ ಔಟಾದರು.
ಈ ಹಂತದಲ್ಲಿ ಜೊತೆಗೂಡಿದ ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಜೋಡಿ ತಂಡದ ಮೊತ್ತವನ್ನು 160 ಗಡಿ ದಾಟಿಸಿದರು. ದುಬೆ 24 ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸಿ 34 ರನ್ ಗಳಿಸಿ ಔಟಾದರು. ಕೊನೆಯ ಹಂತದಲ್ಲಿ ಸ್ಫೋಟಕ ಆಟವಾಡಿದ ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಸಹಿತ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು.
ಅಂತಿಮವಾಗಿ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ ಬಾಂಗ್ಲಾದೇಶಕ್ಕೆ ಗೆಲ್ಲಲು 197 ರನ್ ಗಳ ಬೃಹತ್ ಗುರಿ ನೀಡಿದೆ. ಬಾಂಗ್ಲಾದೇಶ ಪರ ರಿಶಾದ್ ಹೊಸೇನ್ ಮತ್ತು ತಾಂಜಿಮ್ ಹಸನ್ ಸಾಕಿಬ್ ತಲಾ 2 ವಿಕೆಟ್ ಪಡೆದರೆ, ಶಕೀಬ್ ಅಲ್ ಹಸನ್ 1 ವಿಕೆಟ್ ಪಡೆದರು.