ಸೆಂಟ್ ಲೂಸಿಯಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಇಂದಿನ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮೂಲಕ 19000 ರನ್ ಗಳಿಕೆ ಮಾಡಿ Elite ಪಟ್ಟಿ ಸೇರಿದ್ದಾರೆ.
ಇಂದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ರೋಹಿತ್ ಶರ್ಮಾ ಕೇವಲ 41 ಎಸೆತಗಳನ್ನು ಎದುರಿಸಿ 8 ಭರ್ಜರಿ ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 92 ರನ್ ಕಲೆಹಾಕಿದರು. ಕೇವಲ 8 ರನ್ ಗಳ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು.
19,000ಕ್ಕೂ ಅಧಿಕ ಅಂತರಾಷ್ಟ್ರೀಯ ರನ್ ದಾಖಲಿಸಿದ ನಾಲ್ಕನೇ ಭಾರತೀಯ
ರೋಹಿತ್ ಶರ್ಮಾ ಇಂದಿನ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19,000 ರನ್‌ಗಳ ಗಡಿ ದಾಟಿದ ಸಾಧನೆ ಮಾಡಿದರು. ಆ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಈ ಸಾಧಕರ ಪಟ್ಟಿಯಲ್ಲಿದ್ದು, ಇದೀಗ ಈ ಎಲೈಟ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ.
ರೋಹಿತ್ ಶರ್ಮಾ ಟೆಸ್ಟ್ ಮಾದರಿಯಲ್ಲಿ ಈ ವರೆಗೂ 4137 ರನ್ ಕಲೆಹಾಕಿದ್ದು, ಏಕದಿನ ಮಾದರಿಯಲ್ಲಿ 10709 ರನ್ ಗಳಿಸಿದ್ದಾರೆ. ಅಂತೆಯೇ ಟಿ20 ಮಾದರಿಯಲ್ಲಿ 4,165 ರನ್ ಕಲೆಹಾಕಿದ್ದು ಒಟ್ಟಾರೆ ಮೂರು ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಾರೆ 19,011ರನ್ ಗಳಿಸಿದ್ದು ಆ ಮೂಲಕ ಎಲೈಟ್ ಗ್ರೂಪ್ ಸೇರಿದ್ದಾರೆ.