ಸೆಂಟ್ ಲೂಸಿಯಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಹಂತದ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ್ದು ಬೃಹತ್ ಗುರಿ ನೀಡಿದೆ.
ಸೆಂಟ್ ಲೂಸಿಯಾದ ಡರೆನ್ ಸಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಾಯಕ ರೋಹಿತ್ ಶರ್ಮಾರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಕಲೆ ಹಾಕಿದೆ.
ಆ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 206 ರನ್ ಗಳ ಬೃಹತ್ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಆಘಾತ ನೀಡಿದರು. ಆದರೆ ಈ ಹಂತದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು.
ಕೇವಲ 41 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 8 ಭರ್ಜರಿ ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 92 ರನ್ ಕಲೆಹಾಕಿದರು. ಕೇವಲ 8 ರನ್ ಗಳ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು.
ಒಂದೆಡೆ ನಿಯಮಿತವಾಗಿ ವಿಕೆಟ್ ಗಳು ಉರುಳುತ್ತಿದ್ದರೂ ದೃತಿಗೆಡದ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಮುಂದುವರೆಸಿದ್ದರು. ಮತ್ತೊಂದೆಡೆ ರಿಷಬ್ ಪಂತ್ 15 ರನ್, ಸೂರ್ಯ ಕುಮಾರ್ ಯಾದವ್ 31 ರನ್, ಶಿವಂ ದುಬೆ 28ರನ್ ಗೆ ಔಟಾದರು.
ಅಂತಿಮ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯಾ ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತ ತಂಡದ ಮೊತ್ತವನ್ನು ದ್ವಿಶತಕದ ಗಡಿ ದಾಟಿಸಿದರು. ಅಂತಿಮವಾಗಿ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 205ರನ್ ಗಳಿಸಿ ಆಸ್ಟ್ರೇಲಿಯಾಗೆ 206 ರನ್ ಗುರಿ ನೀಡಿದೆ.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟಾಯಿನಸ್ ತಲಾ 2 ವಿಕೆಟ್ ಪಡೆದರೆ, ಜೋಷ್ ಹೇಜಲ್ ವುಡ್ 1 ವಿಕೆಟ್ ಪಡೆದರು.