ನವದೆಹಲಿ: ಹಾಲಿ ಐಸಿಸಿ ಟಿ20 ವಿಶ್ವಕಪ್ 2024 ರಲ್ಲಿ ಚಾಂಪಿಯನ್ ಪಟ್ಟಕ್ಕೇರಬೇಕೆಂಬ ಆಸ್ಟ್ರೇಲಿಯಾ (Australia) ತಂಡದ ಕನಸು ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳಿಂದ ನುಚ್ಚುನೂರಾಗಿದೆ.
ಹೌದು.. ಹಾಲಿ ಟೂರ್ನಿಯಲ್ಲಿ ಸೂಪರ್-8 ಸುತ್ತಿನಲ್ಲಿ ಭಾರತದ ವಿರುದ್ಧ ಸೋತು ಬಹುತೇಕ ಟೂರ್ನಿಯಿಂದ ಹೊರಬಿದ್ದಿದ್ದ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನ vs ಬಾಂಗ್ಲಾದೇಶದ ಪಂದ್ಯದಲ್ಲಿ ಮ್ಯಾಜಿಕ್ ನಿರೀಕ್ಷೆಯಲ್ಲಿತ್ತು.
ಈ ಪಂದ್ಯದಲ್ಲಿ ಬಾಂಗ್ಲಾದೇಶ ಭಾರಿ ಅಂತರದಲ್ಲಿ ಗೆದ್ದಿದ್ದರೆ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಬಿದ್ದು ಆಸ್ಟ್ರೇಲಿಯಾ ಸೆಮಿ ಫೈನಲ್ ಗೇರುವ ಸಾಧ್ಯತೆ ಇತ್ತು.
ಆದರೆ ಬಾಂಗ್ಲಾದೇಶ ವಿರೋಚಿತ ಸೋಲು ಕಂಡು ಆಫ್ಘಾನಿಸ್ತಾನ ಸೆಮಿ ಫೈನಲ್ ಗೇರಿದೆ. ಆ ಮೂಲಕ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳನ್ನೂ ಟೂರ್ನಿಯಿಂದ ಹೊರದಬ್ಬಿದೆ.
ಆಸ್ಟ್ರೇಲಿಯಾ ತಂಡದ ''ವಿಶ್ವ ದಾಖಲೆ''ಯ ಕನಸು ನುಚ್ಚು ನೂರು
ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಮೂಲಕ ಆಸ್ಟ್ರೇಲಿಯಾ ತಂಡದ ಬಹುದೊಡ್ಡ ವಿಶ್ವದಾಖಲೆಯ ಕನಸು ನುಚ್ಚುನೂರಾಗಿದೆ. ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಬಾರಿ ಮೂರು ಸ್ವರೂಪಗಳಲ್ಲಿ ಯಾವುದೇ ತಂಡ ವಿಶ್ವ ಚಾಂಪಿಯನ್ ಆಗಿರಲಿಲ್ಲ. ಈ ಬಾರಿ ಆಸೀಸ್ ಪಡೆಗೆ ಅಂತಹದೊಂದು ವಿಶ್ವ ದಾಖಲೆ ನಿರ್ಮಿಸುವ ಅವಕಾಶವಿತ್ತು.
ಆಸ್ಟ್ರೇಲಿಯಾ ತಂಡವು 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದರು. ಇಂಗ್ಲೆಂಡ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 209 ರನ್ಗಳಿಂದ ಸೋಲಿಸಿ ಆಸ್ಟ್ರೇಲಿಯಾ ಟೆಸ್ಟ್ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
ಇನ್ನು 2023 ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲೂ ಭಾರತ ತಂಡಕ್ಕೆ ಸೋಲುಣಿಸಿ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ ಅಲಂಕರಿಸಿತ್ತು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 6 ವಿಕೆಟ್ಗಳಿಂದ ಮಣಿಸಿ ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿದಿತ್ತು.
ಅದರಂತೆ 2024 ರ ಟಿ20 ವಿಶ್ವಕಪ್ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದೊಂದಿಗೆ ಆಸೀಸ್ ಪಡೆ ಕೆರಿಬಿಯನ್ ದ್ವೀಪಕ್ಕೆ ಆಗಮಿಸಿದ್ದರು. ಈ ಮೂಲಕ ಮೂರು ಸ್ವರೂಪಗಳಲ್ಲೂ ಏಕಾಧಿಪತ್ಯ ಸ್ಥಾಪಿಸುವ ವಿಶ್ವಾಸದಲ್ಲಿತ್ತು.
ಆಸ್ಟ್ರೇಲಿಯಾಗೆ ಕಂಟಕವಾದ ಭಾರತ-ಆಫ್ಘಾನಿಸ್ತಾನ
ದ್ವಿತೀಯ ಸುತ್ತಿನಲ್ಲಿ ಆಸ್ಟ್ರೇಲಿಯಾ ಪಾಲಿಗೆ ಅಫ್ಘಾನಿಸ್ತಾನ-ಭಾರತ ಕಂಟಕವಾಗಿ ಮಾರ್ಪಟ್ಟಿತ್ತು. ಸೂಪರ್-8 ಸುತ್ತಿನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿ ಅಫ್ಘನ್ನರು 2 ಅಂಕ ಪಡೆದರೆ ಇದರ ಬೆನ್ನಲ್ಲೇ ಭಾರತ ಕೂಡ ಆಸಿಸ್ ವಿರುದ್ಧ ಗೆದ್ದು ಸೆಮೀಸ್ ಹಂತಕ್ಕೆ ತಲುಪಿತು.
ಇಂದು ನಡೆದ ಕೊನೆಯ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿದ ಆಫ್ಘಾನಿಸ್ತಾನ ಈ ಮೂಲಕ ಆಸ್ಟ್ರೇಲಿಯಾ ತಂಡವನ್ನು ವಿಶ್ವಕಪ್ ಟೂರ್ನಿಯಿಂದಲೇ ಹೊರದಬ್ಬಿದೆ.
ಇದರೊಂದಿಗೆ ಒಂದೇ ಬಾರಿ ಮೂರು ಸ್ವರೂಪದ ಟೂರ್ನಿಯಲ್ಲೂ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸುವ ಆಸ್ಟ್ರೇಲಿಯಾ ತಂಡದ ಬಹು ದೊಡ್ಡ ಕನಸು ಕೂಡ ಕಮರಿದೆ. ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಕ್ಕ ಈ ಅವಕಾಶ ಕೈ ಚೆಲ್ಲಿಕೊಂಡಿರುವ ಆಸ್ಟ್ರೇಲಿಯಾ ಈ ಸಾಧನೆ ಮಾಡಲು ಮತ್ತೊಮ್ಮೆ ಐಸಿಸಿಯ ಮೂರು ಟೂರ್ನಿಗಳಲ್ಲೂ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟಕ್ಕೇರಬೇಕಿದೆ.