ನವದೆಹಲಿ: ಟಿ20 ವಿಶ್ವಕಪ್ ನ 2 ಸೆಮಿಫೈನಲ್ ಗಳಿಗೆ ಪ್ರತ್ಯೇಕ ನಿಯಮಗಳು ಮತ್ತು ನಿಬಂಧನೆಗಳನ್ನು ಅನ್ವಯಿಸಿರುವುದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗತೊಡಗಿವೆ.
ಜೂ.27 ರಂದು ಗಯಾನದಲ್ಲಿ ನಡೆಯಲಿರುವ ಭಾರತ- ಇಂಗ್ಲೆಂಡ್ ನಡುವಿನ 2 ನೇ ಸೆಮಿಫೈನಲ್ಸ್ ಗೆ ಹವಾಮಾನ ಮುನ್ಸೂಚನೆ ಉತ್ತಮವಾಗಿಲ್ಲ. ಸ್ಥಳೀಯ ಕಾಲಮಾನ ಬೆಳಿಗ್ಗೆ 10:30 ಕ್ಕೆ ಆರಂಭವಾಗುವ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಆದರೆ ವಿಚಿತ್ರವೆಂದರೆ ಇಂತಹ ಮಹತ್ವದ ವಿಶ್ವಕಪ್ ಪಂದ್ಯಕ್ಕೆ ಯಾವುದೇ ಮೀಸಲು ದಿನದ ನಿಬಂಧನೆ ಇಲ್ಲ ICC ಅದೇ ದಿನದಲ್ಲಿ ಪಂದ್ಯವನ್ನು ಪೂರ್ಣಗೊಳಿಸಲು ಹೆಚ್ಚುವರಿ 250 ನಿಮಿಷಗಳು ಲಭ್ಯವಿರುತ್ತವೆ ಎಂದು ಹೇಳಿದೆ.
ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ಜೂನ್ 26 ರಂದು ಟ್ರಿನಿಡಾಡ್‌ನಲ್ಲಿ ಸ್ಥಳೀಯ ಕಾಲಮಾನ ರಾತ್ರಿ 8.30 ರಿಂದ (ಜೂನ್ 27 6 am IST) ನಡೆಯಲಿರುವ ಮೊದಲ ಸೆಮಿಫೈನಲ್ ಮಳೆಯ ಅಡಚಣೆಯ ಸಂದರ್ಭ ಎದುರಾದರೆ ಪ್ರತ್ಯೇಕವಾಗಿ ಆ ಪಂದ್ಯಕ್ಕೆ ಮೀಸಲು ದಿನ ಲಭ್ಯವಿದೆ.
ಎರಡು ಸೆಮಿಫೈನಲ್ಸ್ ಪಂದ್ಯಗಳಿಗೆ ಭಿನ್ನ ರೀತಿಯ ನಿಬಂಧನೆಗಳನ್ನು ವಿಧಿಸಿರುವುದು ಹಾಲಿ ಚಾಂಪಿಯನ್ ಇಂಗ್ಲೆಂಡ್‌ನ ಚಿಂತೆಗೆ ಕಾರಣವಾಗಿದೆ. ಭಾರತದ ವಿರುದ್ಧದ ಸೆಮಿಸ್ ಪಂದ್ಯದಲ್ಲಿ ಮಳೆ ಎದುರಾಗಿ ಸಮಸ್ಯೆಯಾದಲ್ಲಿ ಇಂಗ್ಲೆಂಡ್ ಸೂಪರ್ 8 ರ ಪಾಯಿಂಟ್‌ಗಳ ಪಟ್ಟಿಯಲ್ಲಿ ಹೇಗೆ ಸ್ಥಾನ ಪಡೆದರು ಎಂಬುದರ ಆಧಾರದ ಮೇಲೆ ಇಂಗ್ಲೆಂಡ್ ತಂಡ ಹೊರಹಾಕಲ್ಪಡುತ್ತದೆ.
ಸೂಪರ್ 8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಭಾರತ, ಮಳೆಯಿಂದ ಪಂದ್ಯ ರದ್ದಾದರೂ ಅಂಕ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದೆ. ಇಂಗ್ಲೆಂಡ್ ತಂಡ 2 ನೇ ಗುಂಪಿನಲ್ಲಿ ದಕ್ಷಿಣ ಆಫ್ರಿಕಾದ ನಂತರ ಎರಡನೇ ಸ್ಥಾನ ಪಡೆದಿತ್ತು.
T20 ವಿಶ್ವಕಪ್‌ನ ಆಟದ ನಿಬಂಧನೆಗಳು ಇಂತಿವೆ: 'ಸೆಮಿಫೈನಲ್‌ಗಳು ಒಟ್ಟು 250 ನಿಮಿಷಗಳ ಪಂದ್ಯವನ್ನು ಪೂರ್ಣಗೊಳಿಸಲು ಹೆಚ್ಚುವರಿ ಸಮಯವನ್ನು ಹೊಂದಿರುತ್ತವೆ. ಜೂನ್ 26 ರಂದು ನಡೆಯುವ ಮೊದಲ ಸೆಮಿಫೈನಲ್‌ಗೆ, ದಿನದ ಆಟದ ಕೊನೆಯಲ್ಲಿ 60 ನಿಮಿಷಗಳು ಲಭ್ಯವಿರುತ್ತವೆ ಮತ್ತು ಉಳಿದ 190 ನಿಮಿಷಗಳನ್ನು ಜೂನ್ 27 ರಂದು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಲಾಗಿದೆ.'
'ಜೂನ್ 27 ರಂದು ನಿಗದಿಪಡಿಸಲಾದ ಎರಡನೇ ಸೆಮಿಫೈನಲ್‌ಗೆ ಹೆಚ್ಚುವರಿ 250 ನಿಮಿಷಗಳನ್ನು ನಿಗದಿತ ದಿನದಂದು ವಿಸ್ತೃತ ಆಟದ ಸಮಯದ ಮೂಲಕ ಅಗತ್ಯವಿದ್ದರೆ ಬಳಸಿಕೊಳ್ಳಲಾಗುತ್ತದೆ.' ವೇಳಾಪಟ್ಟಿ ನಿಗದಿಪಡಿಸಿರುವ ಐಸಿಸಿ ಕ್ರಮದಿಂದಾಗಿ ಭಾರತಕ್ಕೆ ಅನುಕೂಲವಾಗಲಿದೆ ಎಂಬ ಆಕ್ಷೇಪ ಕೇಳಿಬಂದಿದೆ.