ಗಯಾನ: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಇಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪಂದ್ಯಕ್ಕೆ ಮಳೆಕಾಟ ಕೂಡ ಶುರುವಾಗಿದೆ.
ಹೌದು.. ಗಯಾನದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ 2ನೇ ಸೆಮಿ ಫೈನಲ್ ಪಂದ್ಯ ನಡೆಯುತ್ತಿದ್ದು, ಸೂಪರ್ 8 ಮೊದಲ ಗ್ರೂಪ್ ನಲ್ಲಿ ಅಗ್ರಸ್ಥಾನಿಯಾಗಿದ್ದ ಭಾರತ ಮತ್ತು ಗ್ರೂಪ್ 2ರಲ್ಲಿ 2ನೇ ಸ್ಥಾನಿಯಾಗಿದ್ದ ಇಂಗ್ಲೆಂಡ್ ಸೆಮಿಫೈನಲ್ ನಲ್ಲಿ ಸೆಣಸುತ್ತಿವೆ.
ಇಂದಿನ ಪಂದ್ಯದಲ್ಲಿ ಭಾರತ ತಂಡವೇ ಗೆಲ್ಲುವ ಫೇವರಿಟ್ ಆಗಿದ್ದರೂ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಇಂದಿನ ಪಂದ್ಯಕ್ಕೆ ಶೇ.50 ಮಳೆಕಾಟದ ಸಂಭವವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದಕ್ಕೆ ಇಂಬು ನೀಡುವಂತೆ ಪಂದ್ಯ ಆರಂಭಕ್ಕೆ ಇನ್ನೂ 1 ಗಂಟೆ ಬಾಕಿ ಇರುವಂತೆಯೇ ಗಯಾನದಲ್ಲಿ ಮಳೆ ಆರಂಭವಾಗಿದೆ. ಆದರೆ ಖುಷಿ ಸಂಗತಿ ಎಂದರೆ ಈ ಮಳೆ ಕೆಲವೇ ಹೊತ್ತಿನಲ್ಲಿ ನಿಂತುಹೋಗಿದ್ದು, ಪಿಚ್ ಮೇಲೆ ಹೊದಿಸಲಾಗಿದ್ದ ಕವರ್ ಗಳನ್ನು ಸಿಬ್ಬಂದಿ ತೆರವು ಮಾಡುತ್ತಿದ್ದಾರೆ.
ಮೀಸಲು ದಿನ ಕೂಡ ಇಲ್ಲ..ಪಂದ್ಯ ರದ್ದಾದರೆ ಮುಂದೇನು?
ಈ ಸೆಮಿಫೈನಲ್ ಪಂದ್ಯಕ್ಕೆ ಐಸಿಸಿ ಮೀಸಲು ದಿನವನ್ನು ಕೂಡ ನಿಗದಿ ಪಡಿಸಿಲ್ಲ. ಹೀಗಾಗಿ ಏನೇ ಆದರೂ ಇಂದೇ ಫಲಿತಾಂಶ ಹೊರಬೀಳಬೇಕಿದೆ.
ಈ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ವಿಳಂಬವಾದಲ್ಲಿ ಒಟ್ಟು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ.
ಈ ಸೆಮಿಫೈನಲ್ ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ. ಒಂದು ವೇಳೆ ಮಳೆಯಿಂದಾಗಿ ಇಡೀ ಪಂದ್ಯ ರದ್ದಾದರೆ ಟೇಬಲ್ ಟಾಪ್ ನಿಯಮದ ಅನ್ವಯ ಭಾರತ ಫೈನಲ್ ಗೆ ಪ್ರವೇಶ ಪಡೆಯಲಿದೆ.