ಐರ್ಲೆಂಡ್‌ಗೆ ಐತಿಹಾಸಿಕ ಮೊದಲ ಜಯ
ಐರ್ಲೆಂಡ್‌ಗೆ ಐತಿಹಾಸಿಕ ಮೊದಲ ಜಯ 
ಕ್ರಿಕೆಟ್

147 ವರ್ಷಗಳಲ್ಲಿ 4ನೇ ವೇಗದ ತಂಡ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಐರ್ಲೆಂಡ್‌ಗೆ ಐತಿಹಾಸಿಕ ಮೊದಲ ಜಯ

Srinivasamurthy VN

ಅಬುದಾಬಿ: ಐರ್ಲೆಂಡ್‌ ತಂಡವು ಅಫ್ಗಾನಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಆರು ವಿಕೆಟ್‌ಗಳ ಐತಿಹಾಸಿಕ ಚೊಚ್ಚಲ ಗೆಲುವು ಸಾಧಿಸಿದೆ.

ಈ ಹಿಂದೆ ಸತತ ಏಳು ಪಂದ್ಯಗಳಲ್ಲಿ ಸೋಲು ಕಂಡಿದ್ದ ಐರ್ಲೆಂಡ್ ತಂಡ ಕೊನೆಗೂ ಆಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ತನ್ನ ಸೋಲಿನ ಸರಣಿಯನ್ನು ಕೊನೆಗೊಳಿಸಿತು. 2018ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ್ದ ಐರ್ಲೆಂಡ್‌, ಈತನಕ ಆಡಿರುವ ಎಂಟು ಪಂದ್ಯಗಳಲ್ಲಿ ಮೊದಲ ಗೆಲುವು ಸಾಧಿಸಿದೆ.

ಮೂರನೇ ದಿನದಾಟದಲ್ಲಿ ಗೆಲುವಿಗೆ 111 ರನ್‌ಗಳ ಗುರಿಯನ್ನು ಪಡೆದ ಐರ್ಲೆಂಡ್‌ ತಂಡವು ನಾಯಕ ಆ್ಯಂಡಿ ಬಲ್ಬಿರ್ನಿ (ಔಟಾಗದೆ 58) ಅವರ ಬ್ಯಾಟಿಂಗ್‌ ಬಲದಿಂದ ಜಯ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ 108 ರನ್‌ಗಳ ಹಿನ್ನಡೆ ಅನುಭವಿಸಿದ್ದ ಅಫ್ಗಾನಿಸ್ತಾನ ತಂಡವು ಎರಡನೇ ಇನಿಂಗ್ಸ್‌ನಲ್ಲಿ 218 ರನ್‌ಗೆ ಕುಸಿಯಿತು. ನಾಯಕ ಹಷ್ಮತ್‌ಉಲ್ಲಾ ಶಾಹಿದಿ ಮತ್ತು ರೆಹಮಾನುಲ್ಲಾ ಗುರ್ಬಾಜ್ ಕ್ರಮವಾಗಿ 55 ಮತ್ತು 46 ರನ್‌ ಗಳಿಸಿ ಕೊಂಚ ಹೋರಾಟ ತೋರಿದರು. ಐರ್ಲೆಂಡ್‌ನ ಮಾರ್ಕ್ ಅಡೇರ್, ಬೇರಿ ಮೆಕಾರ್ಥಿ ಮತ್ತು ಕ್ರೇಗ್ ಯಂಗ್ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು.

147 ವರ್ಷಗಳಲ್ಲಿ 4ನೇ ವೇಗದ ತಂಡ

ಐರ್ಲೆಂಡ್ ಈಗ 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಈ ಸ್ವರೂಪದಲ್ಲಿ ಗೆಲುವನ್ನು ಸಾಧಿಸಿದ ನಾಲ್ಕನೇ ವೇಗದ ತಂಡವಾಗಿದೆ. ಆಸ್ಟ್ರೇಲಿಯಾ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಗೆಲುವು ಸಾಧಿಸಿದ್ದರೆ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಮ್ಮ ಮೊದಲ ಟೆಸ್ಟ್ ಗೆಲ್ಲಲು ಎರಡು ಪಂದ್ಯಗಳನ್ನು ತೆಗೆದುಕೊಂಡಿದ್ದವು. ವೆಸ್ಟ್ ಇಂಡೀಸ್ ಆರು ಪಂದ್ಯಗಳನ್ನು ತೆಗೆದುಕೊಂಡರೆ, ಐರ್ಲೆಂಡ್ ಈಗ ಎಂಟು ಪಂದ್ಯಗಳನ್ನು ತೆಗೆದುಕೊಂಡಿದೆ. ಆ ಮೂಲಕ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಗೆಲುವು ಪಡೆದ ನಾಲ್ಕನೇ ವೇಗದ ತಂಡ ಎಂಬ ಕೀರ್ತಿಗೆ ಐರ್ಲೆಂಡ್ ಭಾಜನವಾಗಿದೆ.

ಅಂದಹಾಗೆ ಭಾರತ ತಂಡ ತನ್ನ ಮೊದಲ ಟೆಸ್ಟ್ ಗೆಲ್ಲಲು ಬರೊಬ್ಬರಿ 25 ಪಂದ್ಯಗಳನ್ನು ತೆಗೆದುಕೊಂಡಿತ್ತು.

SCROLL FOR NEXT