ಆರ್‌ಸಿಬಿ
ಆರ್‌ಸಿಬಿ 
ಕ್ರಿಕೆಟ್

ಅಭಿಮಾನಿಗಳ ಪ್ರೀತಿಗೆ ಸೋತ RCB; ರಿಷಬ್ ಶೆಟ್ಟಿ ಮೂಲಕ ಹೆಸರು ಬದಲಾವಣೆ ಸುಳಿವು ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

Ramyashree GN

ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ಅಭಿಮಾನಿಗಳ ನೆಚ್ಚಿನ ಫ್ರಾಂಚೈಸಿ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಹೆಸರು ಬದಲಾವಣೆಯ ಸೂಚನೆ ನೀಡಿದೆ. ಈ ಮೂಲಕ ಅಭಿಮಾನಿಗಳ ಕೂಗಿಗೆ ಕೊನೆಗೂ ಆರ್‌ಸಿಬಿ ಮಣಿದಿದೆ.

ವಿಶ್ವದ ಶ್ರೀಮಂತ ಟಿ20 ಲೀಗ್‌ ಆರಂಭಕ್ಕಾಗಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಈ ಬಾರಿಯಾದರೂ ಆರ್‌ಸಿಬಿಯ ಲಕ್ ಬದಲಾಗಬಹುದು ಎಂದು ಎದುರುನೋಡುತ್ತಿದ್ದಾರೆ. ಆರ್‌ಸಿಬಿ ತಂಡದ ಲಾಯಲ್ ಅಭಿಮಾನಿಗಳು ಇದೀಗ ಫ್ರಾಂಚೈಸಿಯಿಂದ ಸಿಹಿಸುದ್ದಿಯನ್ನು ಪಡೆದಿದ್ದಾರೆ. Royal Challengers Bangalore ಇನ್ಮುಂದೆ Royal Challengers Bengaluru ಆಗಿ ಬದಲಾಗಲಿದೆ ಎನ್ನುವ ಸುಳಿವು ಸಿಕ್ಕಿದೆ.

ಈ ಕುರಿತು ಆರ್‌ಸಿಬಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಳಾಗಿದ್ದು, ನಟ ರಿಷಬ್ ಶೆಟ್ಟಿ ಅವರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ? ಎಂದು ಶೀರ್ಷಿಕೆ ನೀಡಲಾಗಿದ್ದು, ಕಾಂತಾರ ಸಿನಿಮಾ ಸ್ಟೈಲಿನಲ್ಲಿಯೇ ರಿಷಬ್ ಎಂಟ್ರಿ ಕೊಟ್ಟಿದ್ದಾರೆ. ಮೂರು ಕೋಣಗಳನ್ನು ನಿಲ್ಲಿಸಲಾಗಿದ್ದು, ಪ್ರತಿಯೊಂದರ ಮೇಲೂ Royal, Challengers, Bangalore ಎನ್ನುವ ಪದಗಳನ್ನು ಹಾಕಲಾಗಿದೆ. ಮೂರನೇ ಕೋಣದ ಬಳಿ ಬರುವ ರಿಷಬ್, Bangalore ಎಂದು ಬರೆಯಲಾಗಿದ್ದ ಕೋಣವನ್ನು ಇದು ಬೇಡ ಎಂದು ಕಳಿಸುತ್ತಾರೆ. ಕೊನೆಗೆ ಅರ್ಥ ಆಯ್ತಾ? ಎಂದು ಪ್ರಶ್ನಿಸುತ್ತಾರೆ.

ಐಪಿಎಲ್ 2024ರ ಪಂದ್ಯಾವಳಿ ಆರಂಭಕ್ಕೆ ಮುನ್ನ ಆರ್​ಸಿಬಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್‌ಬಾಕ್ಸ್‌ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಹಲವು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಅನ್‌ಬಾಕ್ಸ್ ಕಾರ್ಯಕ್ರಮಕ್ಕಾಗಿ ಆರ್‌ಬಿಸಿ ಈಗಾಗಲೇ ಟಿಕೆಟ್ ಮಾರಾಟ ಆರಂಭಿಸಿದೆ. ಮಾರ್ಚ್ 19ರಂದು ಕಾರ್ಯಕ್ರಮ ನಡೆಯಲಿದ್ದು, ಮನರಂಜನಾ ಕಾರ್ಯಕ್ರಮದ ಜೊತೆಗೆ ಹಲವು ಅಚ್ಚರಿಗಳು ಕೂಡ ಅಭಿಮಾನಿಗಳಿಗೆ ಕಾದಿವೆ.

ಇದೇ ಕಾರ್ಯಕ್ರಮದಲ್ಲಿ ಆರ್‌ಸಿಬಿ ತನ್ನ ಹೆಸರು ಬದಲಿಸುವ ಘೋಷಣೆಯನ್ನು ಮಾಡಲಿದೆ ಎನ್ನುವ ಸುಳಿವನ್ನು ನೀಡಲಾಗಿದೆ. ಅಭಿಮಾನಿಗಳು ಇದೀಗ ಅನ್‌ಬಾಕ್ಸ್ ಕಾರ್ಯಕ್ರಮಕ್ಕಾಗಿ ಕಾತರದಿಂದ ಕಾಯುವಂತಾಗಿದೆ.

ಇದೇ ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ರೋಚಕ ಉದ್ಘಾಟನಾ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಸೆಣಸಲಿವೆ.

SCROLL FOR NEXT